ಮಹಿಳಾ ಬಾಸ್ಕೆಟ್‌ಬಾಲ್‌ ವಿಶ್ವಕಪ್‌| ದಾಖಲೆಯ 11ನೇ ಬಾರಿ ಚಾಂಪಿಯನ್‌ ಪಟ್ಟಕ್ಕೇರಿದ ಅಮೆರಿಕ

Prasthutha|

ಸಿಡ್ನಿ: ಮಹಿಳಾ ಬಾಸ್ಕೆಟ್‌ಬಾಲ್‌ ವಿಶ್ವಕಪ್‌ನ ಫೈನಲ್‌ನಲ್ಲಿ ಚೀನಾ ವನಿತೆಯರನ್ನು 83-61 ಅಂಕಗಳ ಅಂತರದಲ್ಲಿ ಮಣಿಸಿದ ಹಾಲಿ ಚಾಂಪಿಯನ್‌ ಅಮೆರಿಕ, ದಾಖಲೆಯ 11ನೇ ಬಾರಿಗೆ ಮಹಿಳಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದು ಸಂಭ್ರಮಿಸಿದೆ.  ಸತತವಾಗಿ ಅಮೆರಿಕ ಗೆಲ್ಲುತ್ತಿರುವ ನಾಲ್ಕನೇ ವಿಶ್ವಕಪ್‌ ಪ್ರಶಸ್ತಿ ಇದಾಗಿದೆ.

- Advertisement -

ವಿಶ್ವ ಚಾಂಪಿಯನ್‌ ಪಟ್ಟಕ್ಕಾಗಿ ಸಿಡ್ನಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ, ಫೇವರಿಟ್‌ ಪಟ್ಟದೊಂದಿಗೆ ಕಣಕ್ಕಿಳಿದ ಅಮೆರಿಕ, ಎಲ್ಲಾ ಹಂತದಲ್ಲೂ ಚೀನಾ ಸವಾಲನ್ನು ಮೆಟ್ಟಿ ನಿಂತು ಮುನ್ನಡೆಯಿತು. ನಾಯಕಿ ಅಜಾ ವಿಲ್ಸನ್ 19 ಅಂಕಗಳಿಸುವ ಮೂಲಕ ಮಿಂಚಿದರು. ಪ್ರತಿಷ್ಠಿತ ಡಬ್ಲ್ಯೂಎನ್‌ಬಿಎ ಕೂಟದಲ್ಲಿ ವಿಲ್ಸನ್‌, ಲಾಸ್ ವೇಗಾಸ್ ಏಸಸ್‌ ತಂಡದ ಪರ ಆಡುತ್ತಿದ್ಧಾರೆ.

ಮೊದಲ ಅವಧಿಯಂತ್ಯಕ್ಕೆ 18-13 ರಿಂದ ಆರಂಭಿಕ ಮುನ್ನಡೆ ಗಳಿಸಿದ್ದ ಅಮೆರಿಕ, ಮೊದಲಾರ್ಧದ ಅಂತ್ಯಕ್ಕೆ ಮುನ್ನಡೆಯನ್ನು 43-33 ಕ್ಕೆ ವಿಸ್ತರಿಸಿತ್ತು. ಆ ಬಳಿಕ ಜೆವೆಲ್ ಲಾಯ್ಡ್ ಮತ್ತು ಕೆಲ್ಸಿ ಪ್ಲಮ್ ಆಟದ ಎದುರು ಮಂಕಾದ ಚೀನಾ, ಮೂರನೇ ಅವಧಿಯಂತ್ಯಕ್ಕೆ ಒಟ್ಟು 21 ಅಂಕಗಳ ಹಿನ್ನಡೆ ಅನುಭವಿತ್ತು.

- Advertisement -

ಆಸ್ಟ್ರೇಲಿಯಾಗೆ ಮೂರನೇ ಸ್ಥಾನ

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು, ಕೆನಡಾ ವಿರುದ್ಧ 95-65 ಅಂತರದಲ್ಲಿ ಜಯಗಳಿಸಿತು. ತನ್ನ ವೃತ್ತಿ ಜೀವನದ ಅಂತಿಮ ಪಂದ್ಯವನ್ನಾಡಿದ  ಲಾರೆನ್ ಜಾಕ್ಸನ್, 30 ಅಂಕಗಳನ್ನು ಗಳಿಸುವ ಮೂಲಕ ಜಯದ ರುವಾರಿ ಎನಿಸಿದರು.

2016ರಲ್ಲಿ ನಿವೃತ್ತಿ ಘೋಷಿಸಿದ ಬಳಿಕ ಕೊನೆಯದಾಗಿ ಶನಿವಾರ ಬಾಸ್ಕೆಟ್‌ಬಾಲ್‌ ಅಂಗಣಕ್ಕಿಳಿದ ಜಾಕ್ಸನ್‌, ʻನನ್ನ ವೃತ್ತಿಜೀವನ ಅತ್ಯುತ್ತಮ ಪ್ರಯಾಣವಾಗಿತ್ತು. ಸಹ ಆಟಗಾರ್ತಿಯರ ಬೆಂಬಲಕ್ಕೆ ಋಣಿಯಾಗಿದ್ದೇನೆʼ ಎಂದರು.



Join Whatsapp