ಅಹಮದಾಬಾದ್: 36ನೇ ರಾಷ್ಟ್ರೀಯ ಕ್ರೀಡಾಕೂಟದ ಪ್ರಮುಖ ಆಕರ್ಷಣೆಯಾಗಿದ್ದ 100 ಮೀಟರ್ ಓಟ ವಿಭಾಗದಲ್ಲಿ ಅಮ್ಲಾನ್ ಬೊರ್ಗೊಹೈನ್ ಮತ್ತು ಜ್ಯೋತಿ ಯರ್ರಾಜಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಕೂಟದ ಎರಡನೇ ದಿನ ನಡೆದ ಫೈನಲ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅಸ್ಸಾಂನ ಅಮ್ಲಾನ್ ಬೊರ್ಗೊಹೈನ್, 10.38 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಶುಕ್ರವಾರ ನಡೆದ ಸೆಮಿಫೈನಲ್ ಅಮ್ಲಾನ್ 10.28 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕೂಟ ದಾಖಲೆ ನಿರ್ಮಿಸಿದ್ದರು. ಆದರೆ ಫೈನಲ್‌ನಲ್ಲಿ ಈ ಸಾಧನೆಯನ್ನು ಪುನರಾವರ್ತಿಸುವಲ್ಲಿ ಅಸ್ಸಾಂನ ಓಟಗಾರ ವಿಫಲರಾದರು. 10.44 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ತಮಿಳುನಾಡಿನ ಎಲಕಿಯದಾಸನ್ ಎರಡನೇ ಸ್ಥಾನ ಪಡೆದರು.
ಮಹಿಳೆಯರ 100 ಮೀಟರ್ ಓಟ ವಿಭಾಗದಲ್ಲಿ ಆಂಧ್ರಪ್ರದೇಶದ ಜ್ಯೋತಿ ಯರ್ರಾಜಿ 11.51 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಶುಕ್ರವಾರ ನಡೆದಿದ್ದ 100 ಮೀ ಹರ್ಡಲ್ಸ್‌ನಲ್ಲಿ, ಖ್ಯಾತ ಓಟಗಾತಿ ದ್ಯುತಿ ಚಂದ್ ಅವರನ್ನು ಹಿಂದಿಕ್ಕಿದ್ದ ಜ್ಯೋತಿ ಯರ್ರಾಜಿ (11.45 ಸೆಕೆಂಡ್ ಸಮಯ) ಮೊದಲಿಗರಾಗಿ ಗುರಿ ತಲುಪಿದ್ದರು. 100 ಮೀ ಹರ್ಡಲ್ಸ್‌ನಲ್ಲಿ ಜ್ಯೋತಿ, ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ.
ಮಹಿಳೆಯರ 100 ಮೀಟರ್ ಓಟ ವಿಭಾಗದಲ್ಲಿ ತಮಿಳುನಾಡಿನ ಅರ್ಚನಾ ಸುಸೀಂದ್ರನ್ (11.55 ಸೆಕೆಂಡ್) ಬೆಳ್ಳಿ ಹಾಗೂ ಮಹಾರಾಷ್ಟ್ರದ ಡಿಯಾಂಡ್ರಾ (11.62 ಸೆಕೆಂಡ್) ಕಂಚಿನ ಪದಕ ಗೆದ್ದರು. ಕೂಟದ ನೆಚ್ಚಿನ ಸ್ಪರ್ಧಿಗಳಾಗಿದ್ದ ಅಸ್ಸಾಂನ ಹಿಮಾ ದಾಸ್ ಮತ್ತು ಒಡಿಶಾದ ದ್ಯುತಿ ಚಂದ್ ಪೋಡಿಯಂ ಫಿನಿಶ್ ಮಾಡುವಲ್ಲಿ ವಿಫಲರಾದರು.
400 ಮೀಟರ್ ಓಟ
ಪುರುಷರ 400 ಮೀಟರ್ ಫೈನಲ್‌ನಲ್ಲಿ ಸರ್ವೀಸಸ್‌ನ ಮುಹಮ್ಮದ್ ಅಜ್ಮಲ್, ಕೂಟ ದಾಖಲೆಯೊಂದಿಗೆ (46.29 ಸೆಕೆಂಡ್) ಚಿನ್ನ ಗೆದ್ದರು. ಸೆಮಿಫೈನಲ್‌ನಲ್ಲಿ ದಾಖಲೆಯ ಸಮಯ ದಾಖಲಿಸಿದ್ದ (46.30 ಸೆಕೆಂಡ್) ದೆಹಲಿಯ ಅಮೊಜ್ ಜೇಕಬ್, ಅಜ್ಮಲ್ ನಂತರದ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು. ಮಹಿಳೆಯರ ವಿಭಾಗದಲ್ಲಿ ಮಹಾರಾಷ್ಟ್ರದ ಐಶ್ವರ್ಯ ಮಿಶ್ರಾ (52.62 ಸೆಕೆಂಡ್) ಚಿನ್ನ ಗೆದ್ದರೆ, ಆಂಧ್ರಪ್ರದೇಶದ ಜ್ಯೋತಿಕಾಶ್ರೀ ಮತ್ತು ಉತ್ತರ ಪ್ರದೇಶದ ರೂಪಲ್ ಚೌಧರಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.
7 ವರ್ಷಗಳ ಬಳಿಕ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ಮೊದಲ ದಿನವೇ 7 ಕೂಟ ದಾಖಲೆಗಳು ನಿರ್ಮಾಣವಾಗಿದೆ. ಪುರುಷರ 1500 ಮೀ. ಓಟದಲ್ಲಿ ಸರ್ವಿಸಸ್‌ನ ಪರ್ವೇಝ್ ಖಾನ್, ಟ್ರಿಪಲ್ ಜಂಪ್‌ನಲ್ಲಿ ತಮಿಳುನಾಡಿನ ಪ್ರವೀಣ್ ಚಿತ್ರಾವೇಲ್, ಹ್ಯಾಮರ್‌ಥ್ರೋನಲ್ಲಿ ಪಂಜಾಬ್‌ನ ದಮ್ನೀತ್ ಸಿಂಗ್, ಮಹಿಳೆಯರ ಹೈಜಂಪ್‌ನಲ್ಲಿ ಮಧ್ಯಪ್ರದೇಶದ ಸ್ವಪ್ನಾ, ಶಾಟ್‌ಪುಟ್‌ನಲ್ಲಿ ಉತ್ತರ ಪ್ರದೇಶದ ಕಿರಣ್ ಬಲ್ಯಾನ್, ಮಹಿಳೆಯರ 20 ಕಿ.ಮೀ. ವೇಗದ ನಡಿಗೆಯಲ್ಲಿ ಉತ್ತರ ಪ್ರದೇಶದ ಮುನಿತಾ, ಪುರುಷರ 100 ಮೀ. ಓಟದ ಸೆಮೀ ಫೈನಲ್‌ನಲ್ಲಿ ಅಸ್ಸಾಂನ ಅಮ್ಲಾನ್ ಬೊರ್ಗೊಹೈನ್ ಕೂಟದ ದಾಖಲೆ ನಿರ್ಮಿಸಿದ್ದರು.