ಸರ್ಕಾರಕ್ಕೆ ಧಮ್ ಇದ್ದರೆ ಶೀಘ್ರವೇ ಬಿಬಿಎಂಪಿ ಚುನಾವಣೆ ನಡೆಸಲಿ: ಬ್ರಿಜೇಶ್ ಕಾಳಪ್ಪ

Prasthutha|

ಬೆಂಗಳೂರು: ಬಿಜೆಪಿಗೆ ಬೆಂಗಳೂರಿನ ಹಿತಕ್ಕಿಂತ ಅಡ್ಡದಾರಿಯಲ್ಲಿ ಅಧಿಕಾರ ಚಲಾಯಿಸುವುದೇ ಮುಖ್ಯವೆಂಬುದು ಬಿಬಿಎಂಪಿ ಚುನಾವಣೆಯ ಪದೇಪದೇ ಮುಂದೂಡಿಕೆಯಿಂದ ಸ್ಪಷ್ಟವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.

- Advertisement -


ಆಮ್ ಆದ್ಮಿ ಪಾರ್ಟಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬ್ರಿಜೇಶ್ ಕಾಳಪ್ಪ, “ಕಳೆದ ಬಿಬಿಎಂಪಿ ಚುನಾವಣೆ ವೇಳೆ ಬೆಂಗಳೂರಿಗೆ ಆಗಮಿಸಿದ್ದ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ಬೆಂಗಳೂರನ್ನು ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದ್ದರು. ಬಿಜೆಪಿಯು ಡಬಲ್ ಎಂಜಿನ್ ಕೇಳಿದ್ದರೆ, ಜನರು ದೇಶ, ರಾಜ್ಯ ಹಾಗೂ ಬಿಬಿಎಂಪಿಯಲ್ಲೂ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ತ್ರಿಬಲ್ ಎಂಜಿನ್ ನೀಡಿದರು. ಆದರೆ ಅಧಿಕಾರ ಸಿಕ್ಕ ಬಳಿಕೆ ಬೆಂಗಳೂರಿನ ಜನರನ್ನು ಬಿಜೆಪಿ ಮರೆತಿದ್ದು, ಬಿಬಿಎಂಪಿ ಚುನಾವಣೆಗೆ ಹೆದರುವ ಸ್ಥಿತಿ ತಲುಪಿದೆ. ಸರ್ಕಾರಕ್ಕೆ ಧಮ್ ಇದ್ದರೆ ಚುನಾವಣೆ ನಡೆಸಲಿ” ಎಂದು ಹೇಳಿದರು.


“ಮೃತಪಟ್ಟ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬದವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಿ ನೌಕರಿ ನೀಡಿದ್ದಾರೆ. ಆದರೆ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಬಲಿಯಾದವರ ಕುಟುಂಬದವರಿಗೆ ನೌಕರಿ ನೀಡಿಲ್ಲ. ಬೆಂಗಳೂರಿಗರ ಬಗ್ಗೆ ಮುಖ್ಯಮಂತ್ರಿಗಿರುವ ತಾತ್ಸಾರವನ್ನು ಇದರಿಂದ ತಿಳಿಯಬಹುದು. ಬಿಬಿಎಂಪಿ ಚುನಾವಣೆ ನಡೆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು 243 ಜನಪ್ರತಿನಿಧಿಗಳು ಸಿಗುತ್ತಾರೆ ಎಂಬ ಯೋಚನೆ ಕೂಡ ಈ ಸರ್ಕಾರಕ್ಕಿಲ್ಲ. ಮೊನ್ನೆ ನೆರೆ ಬಂದಾಗ ಕೂಡ ಯಾರನ್ನು ಪ್ರಶ್ನಿಸಬೇಕು ಎಂಬ ಗೊಂದಲವು ಬೆಂಗಳೂರಿನ ಜನರನ್ನು ಕಾಡಿತು. ಬಿಬಿಎಂಪಿ ಚುನಾವಣೆ ನಡೆದರೆ ಬಿಜೆಪಿ ಗೆಲ್ಲುವುದಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರವು ಚುನಾವಣೆಯನ್ನು ಮುಂದೂಡುತ್ತಲೇ ಬಂದಿದೆ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.

- Advertisement -


“ಬೆಂಗಳೂರಿನ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ 28 ಶಾಸಕರಿದ್ದಾರೆ. ಅವರಲ್ಲಿ ಯಾರೂ ಕೂಡ ಬಿಬಿಎಂಪಿ ಚುನಾವಣೆ ನಡೆಯಬೇಕು ಎಂದು ಗಟ್ಟಿಧ್ವನಿಯಲ್ಲಿ ಕೇಳುವ ಪ್ರಯತ್ನ ಮಾಡಿಲ್ಲ. ಅವರ್ಯಾರಿಗೂ ಬಿಬಿಎಂಪಿ ಚುನಾವಣೆ ನಡೆಯುವುದು ಹಾಗೂ ಬೆಂಗಳೂರಿನ ಸಮಸ್ಯೆಗಳಿಗೆ ಜವಾಬ್ದಾರಿ ಹೊರುವವರು ಇರಬೇಕು ಎಂಬ ಕಾಳಜಿಯಿಲ್ಲ. ಆಮ್ ಆದ್ಮಿ ಪಾರ್ಟಿಯೊಂದೇ ಬಿಬಿಎಂಪಿ ಚುನಾವಣೆ ನಡೆಯಬೇಕೆಂದು ದೀರ್ಘಕಾಲದಿಂದ ಆಗ್ರಹಿಸುತ್ತಾ ಬಂದಿದೆ. ಏಕೆಂದರೆ ಎಎಪಿಗೆ ಮಾತ್ರ ಬೆಂಗಳೂರಿನ ಸಮಸ್ಯೆಗಳು ಕಾಣಿಸುತ್ತಿವೆ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.




Join Whatsapp