ಪಾಟ್ನಾ: ಹಿರಿಯ ಐಎಎಸ್ ಅಧಿಕಾರಿ, ಹರ್ಜೋತ್ ಕೌರ್ ಭಮ್ರಾ ಸಂವಾದವೊಂದರಲ್ಲಿ ಹೇಳಿದ ಮಾತು ವಿವಾದಕ್ಕೆ ಕಾರಣವಾಗಿದೆ.
UNICEF ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ, ಉಚಿತ ಸೈಕಲ್ ಮತ್ತು ಶಾಲಾ ಸಮವಸ್ತ್ರಗಳನ್ನು ವಿತರಿಸುವ ಸರ್ಕಾರವು ಉಚಿತ ಸ್ಯಾನಿಟರಿ ಪ್ಯಾಡ್ ಗಳನ್ನು ನೀಡುವ ಬಗ್ಗೆಯೂ ಯೋಚಿಸಬೇಕು ಎಂದು ಶಾಲಾ ವಿದ್ಯಾರ್ಥಿನಿಯರು ವಿನಂತಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಹರ್ಜೋತ್ ಕೌರ್ ಭಮ್ರಾ ಅವರು, ಸರ್ಕಾರ ಈಗಾಗಲೇ ಸಾಕಷ್ಟು ಉಚಿತ ಯೋಜನೆಗಳನ್ನು ನೀಡುತ್ತಿದೆ. ಇಂದು ನೀವು ಉಚಿತ ಸ್ಯಾನಿಟರಿ ಪ್ಯಾಡ್ ಕೇಳುತ್ತೀರಿ. ನಾಳೆ ನಿಮಗೆ ಜೀನ್ಸ್ ಮತ್ತು ಶೂಗಳು ಬೇಕಾಗಬಹುದು. ನಂತರ, ಕುಟುಂಬ ಯೋಜನೆ ವಿಚಾರ ಬಂದಾಗ, ಉಚಿತ ಕಾಂಡೋಮ್ ಬೇಕು ಎಂದು ಬೇಡಿಕೆ ಸಲ್ಲಿಸಬಹುದು ಎಂದು ಹೇಳಿದ್ದಾರೆ.
ಈ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗವು, ಅಧಿಕಾರಿ ಹರ್ಜೋತ್ ಕೌರ್ ಭಮ್ರಾ ವಿರುದ್ಧ ನೋಟಿಸ್ ಜಾರಿ ಮಾಡಿದ್ದು, ಮುಂದೆ ತಪ್ಪು ಕಂಡು ಬಂದಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಹರ್ಜೋತ್ ಕೌರ್ ಭಮ್ರಾ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯಾಗಿದ್ದು, ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಆಯೋಗದ ಮುಖ್ಯಸ್ಥರಾಗಿದ್ದಾರೆ.