ಬೆಳಗಾವಿ: ನಗರದ ಕ್ಯಾಂಪ್ ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳು ಬಾಲಕನಿಗೆ ಚಾಕುವಿನಿಂದ ಇರಿದು ಪರಾರಿ ಆದ ಬೆನ್ನಲ್ಲೇ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ನಗರದ ಕ್ಯಾಂಪ್ ಪ್ರದೇಶದ ನಿವಾಸಿ ಫರಾನ್ ಧಾರವಾಡಕರ್(15) ಬೆನ್ನಿಗೆ ಚೂರಿ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ತಕ್ಷಣವೇ ಗಾಯಗೊಂಡ ಫರಾನ್ನನ್ನು ನಗರದ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದ ಕೂಡಲೇ ಬಿಮ್ಸ್ ಆವರಣದಲ್ಲಿ ಜಮಾವಣೆಗೊಳ್ಳುತ್ತಿದ್ದ ಜನರನ್ನು ಎಪಿಎಂಸಿ ಪೊಲೀಸರು ಚದುರಿಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಡಿಸಿಪಿ ಸ್ನೇಹಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಂಬಾ ಭವನ ಹತ್ತಿರ ಬೈಕ್ ಮೇಲೆ ಫರಾನ್ ಸೇರಿ ಮೂವರು ಯುವಕರು ಹೋಗುತ್ತಿರುವಾಗ, ಹತ್ತು ಜನ ಯುವಕರ ಗುಂಪು ಬೈಕ್ ಸವಾರರನ್ನು ತಡೆದು ಫರಾನ್ ಮೇಲೆ ಚೂರಿಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಆ ಸಂದರ್ಭದಲ್ಲಿ ಫರಾನ್ ಜೊತೆಯಲ್ಲಿದ್ದ ಇಬ್ಬರು ಯುವಕರು ತಪ್ಪಿಸಿಕೊಂಡು ಮನೆ ತಲುಪಿದ್ದಾರೆ.
ಸುದ್ದಿ ತಿಳಿದು ಜಿಲ್ಲಾಸ್ಪತ್ರೆಗೆ ಪೊಲೀಸ್ ಅಧಿಕಾರಿಗಳು ಧಾವಿಸಿ ಘಟನೆ ಮಾಹಿತಿ ಪಡೆದುಕೊಂಡಿದ್ದಾರೆ. ಹಲ್ಲೆ ಮಾಡಿವದರು ಯಾರು ಹಾಗೂ ಹಲ್ಲೆಗೆ ಕಾರಣ ಏನು ಎಂದು ಇದುವರೆಗೂ ತಿಳಿದು ಬಂದಿಲ್ಲ.
ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.