ಮೈಸೂರು: ಭಾರತ್ ಜೋಡೋ ಕರ್ನಾಟಕ ಯಾತ್ರೆಯ ವೇಳಾಪಟ್ಟಿ ಬಹುತೇಕ ಅಂತಿಮವಾಗಿದ್ದು, ಈ ಕುರಿತು ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತ ಜೋಡೋ ಯಾತ್ರೆಯ ತಯಾರಿಗೆ ಸಂಬಂಧಿಸಿದಂತೆ ಎಐಸಿಸಿ ಪಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ರಾಜ್ಯದ ಯಾತ್ರೆಯ ಉಸ್ತುವಾರಿ ಹೊತ್ತಿರುವ ಬಿ.ಕೆ. ಹರಿಪ್ರಸಾದ್ ಅವರ ಜತೆಗೆ ಯಾತ್ರೆ ಮಾರ್ಗದ ಸಿದ್ಧತೆ ಪರಿಶೀಲನೆಗೆ ಬಂದಿದ್ದೇನೆ ಎಂದು ತಿಳಿಸಿದರು.
ಗುಂಡ್ಲುಪೇಟೆಯಿಂದ ಮೈಸೂರು, ಮಂಡ್ಯ, ನಾಗಮಂಗಲ ಮೂಲಕವಾಗಿ ಆದಿಚುಂಚನಗಿರಿವರೆಗೂ ಇಂದು ಪರಿಶೀಲನೆ ಮಾಡುತ್ತೇವೆ.ನಾಳೆ ಬಳ್ಳಾರಿ ಮತ್ತು ಉತ್ತರ ಕರ್ನಾಟಕ ಭಾಗದ ಪರಿಶೀಲನೆ ನಡೆಯಲಿದೆ. ಮಾರ್ಗದ ವೇಳಾಪಟ್ಟಿ ಬಹುತೇಕ ಅಂತಿಮವಾಗಿದ್ದು, ಶೀಘ್ರದಲ್ಲೇ ನೀಡುತ್ತೇನೆ. ಯಾತ್ರೆ ಕೇರಳದಲ್ಲಿ ಯಶಸ್ಸಿನೊಂದಿಗೆ ಸಾಗಿ ಬರುತ್ತಿದೆ. ದೇಶದೆಲ್ಲೆಡೆ ಯುವಕರು ಸೇರಿದಂತೆ ಎಲ್ಲ ವರ್ಗದ ಜನರ ಬೆಂಬಲ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಯಾತ್ರೆಯನ್ನು ಪಕ್ಷಾತೀತವಾಗಿ ಉಪಯೋಗಿಸಿಕೊಳ್ಳಬೇಕು. ನಿಮ್ಮ ನಡಿಗೆ ದೇಶಕ್ಕೆ ಕೊಡುಗೆ ಎಂಡು ಹೇಳ ಬಯಸುತ್ತೇನೆ ಎಂದು ತಿಳಿಸಿದರು.
ಮೈಸೂರು ನಗರದಲ್ಲಿ ಪಾದಯಾತ್ರೆ ಬೆಳಗ್ಗೆ 6.30ಕ್ಕೆ ಆರಂಭವಾಗಲಿದೆ. ಹೀಗಾಗಿ ಅಂದು ಮೈಸೂರಿನ ಜನರು ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕಬೇಕು. ಜೀವನದಲ್ಲಿ ಒಮ್ಮೆ ಮಾತ್ರ ಇಂತಹ ಅವಕಾಶ ಸಿಗುತ್ತದೆ. ಇದನ್ನು ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.
ಕಾರ್ಯಕರ್ತರಲ್ಲಿರುವ ಉತ್ಸಾಹ ನೋಡಿದರೆ ಈ ಯಾತ್ರೆ ಮುಂಬರುವ ರಾಜ್ಯ ಹಾಗೂ ರಾಷ್ಟ್ರ ಚುನಾವಣೆ ಮೇಲೆ ಪ್ರಭಾವ ಬೀರಲಿದೆ. ದಸರಾ ಸಮಯದಲ್ಲಿ ಜನರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ 2 ದಿನ ವಿಶ್ರಾಂತಿ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.