ದಾಳಿ, ಬಂಧನದಿಂದ ಹೋರಾಟವನ್ನು ದಮನಿಸಲು ಅಸಾಧ್ಯ: ಇಲ್ಯಾಸ್ ಮುಹಮ್ಮದ್

Prasthutha|

ಬಂಟ್ವಾಳ: ನರಹತ್ಯೆ, ಗಡಿಪಾರು ಮೊದಲಾದ ಕ್ರಿಮಿನಲ್ ಹಿನ್ನೆಲೆ ಇರುವ ದುಷ್ಟ ಶಕ್ತಿಗಳು ಆಡಳಿತ ಮಾಡುವ ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನದ ಉಳಿಯುವಿಗಾಗಿ ರಾಜಿರಹಿತ ಹೋರಾಟ ನಡೆಸುವವರ ಮೇಲೆ ತನಿಖಾ ಸಂಸ್ಥೆಗಳ ದಾಳಿ, ಬಂಧನ ಆಶ್ಚರ್ಯ ಪಡುವ ವಿಷಯವೇನು ಅಲ್ಲ ಎಂದು ಎಸ್.ಡಿ.ಪಿ.ಐ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

- Advertisement -


ಎಸ್.ಡಿ.ಪಿ.ಐ. ಜಿಲ್ಲಾ ಕಚೇರಿಯಲ್ಲಿ ಎನ್.ಐ.ಎ. ಅಧಿಕಾರಿಗಳು ನಡೆಸಿದ ಅತಿಕ್ರಮಣ ಹಾಗೂ ಪಿ.ಎಫ್.ಐ. ನಾಯಕರ ಅಕ್ರಮ ಬಂಧನವನ್ನು ವಿರೋಧಿಸಿ ಎಸ್.ಡಿ.ಪಿ.ಐ. ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಬಿ.ಸಿ.ರೋಡ್ ಕೈಕಂಬದಲ್ಲಿ ಶನಿವಾರ ನಡೆದ ಪ್ರತಿಭನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನಾಯಕರ ಮೇಲೆ ದಾಳಿ, ಬಂಧನದಿಂದ ಎಸ್.ಡಿ.ಪಿ.ಐ., ಪಿ.ಎಫ್.ಐ.ನ ಕಾರ್ಯಕರ್ತರನ್ನು ಭಯಪಡಿಸಬಹುದು ಎಂದು ಆರೆಸ್ಸೆಸ್, ಬಿಜೆಪಿ ಭಾವಿಸಿದ್ದರೆ ಅದು ಅವರ ಭ್ರಮೆ. ಇಂತಹ ಸುಳ್ಳು ಆರೋಪದಿಂದ ಯಾವೋರ್ವ ಕಾರ್ಯಕರ್ತನೂ ಹೋರಾಟದಿಂದ ಹಿಂಜರಿಯಲಾರನು. ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿ ಜೈಲು ಪಾಲಾದ ಪ್ರಜ್ಞಾ ಸಿಂಗ್ ಅವರಂತಹವರು ಸಂಸತ್ತಿನಲ್ಲಿ ಕೂತು ಕಾನೂನು ರಚಿಸುವ ಈ ದೇಶದಲ್ಲಿ ಹೋರಾಟಗಾರರ ಮೇಲಿನ ದಾಳಿ, ಬಂಧನ ನಾವು ನಿರೀಕ್ಷಿಸಿದ್ದೇ ಅಗಿದೆ ಎಂದು ಅವರು ಹೇಳಿದರು.
ಪಿ.ಎಫ್.ಐ. ಅನ್ನು ನಿಷೇಧಿಸಲು ಸಾಕ್ಷ್ಯಾಧಾರಗಳು ಸಂಗ್ರಹಿಸಲು ಎಂಟು ವರ್ಷಗಳಿಂದ ಶ್ರಮಿಸಿ ಸೋತು ಹೋಗಿರುವ ಬಿಜೆಪಿ ತನಗಾಗಿರುವ ಮುಖಭಂಗವನ್ನು ಮರೆಮಾಚಲು ಕೊನೆಗೆ ಪಿ.ಎಫ್.ಐ. ನಾಯಕರನ್ನು ಟೆರೆರ್ ಲಿಂಕ್ ಆರೋಪದಲ್ಲಿ ಬಂಧಿಸಿ ಜೈಲಿಗೆ ತಳ್ಳಿದೆ. ಇದರಿಂದ ಪಿ.ಎಫ್.ಐ. ನಿಷ್ಕ್ರಿಯಗೊಳ್ಳಲಿದೆ ಎಂಬುದು ಅವರ ಲೆಕ್ಕಾಚಾರ. ಈ ಲೆಕ್ಕಾಚಾರದಿಂದ ಅವರ ಕಾರ್ಯಕರ್ತರನ್ನು ಒಂದು ದಿನ ಸಮಾಧಾನ ಪಡಿಸಲು ಮಾತ್ರ ಸಾಧ್ಯ ಎಂದು ಅವರು ನುಡಿದರು.


ಸರಕಾರದ ವಿರುದ್ಧ ದ್ವನಿ ಎತ್ತುವವರ ವಿರುದ್ಧ ದೇಶ ದ್ರೋಹ ಕೇಸ್ ದಾಖಲಿಸುವ ಕೆಲಸ ನಡೆಯುತ್ತಿದೆ. ಪ್ರಸಕ್ತ ದೇಶದಲ್ಲಿ ದಲಿತರು, ಮುಸ್ಲಿಮರು, ಕ್ರೈಸ್ತರನ್ನು ಉಸಿರು ಕಟ್ಟಿಸುವ ವಾತಾವರಣ ನಡೆಯುತ್ತಿದೆ. ತ್ರಿಶೂಲ, ಖಡ್ಗ, ಬಂದೂಕು ದೀಕ್ಷೆ ಕೊಡುವ ಆರೆಸ್ಸೆಸ್, ಸಂಘ ಪರಿವಾರ, ಬಿಜೆಪಿಗೆ ಟೆರರ್ ಲಿಂಕ್ ಇದೆಯೇ ಹೊರತು ಎಸ್.ಡಿ.ಪಿ.ಐ. ಮತ್ತು ಪಿ.ಎಫ್.ಐ.ಗೆ ಅಲ್ಲ. ದೇಶದಲ್ಲಿ ಯಾವುದಾದರೂ ಒಂದು ಸಂಘಟನೆ ನಿಷೇಧ ಆಗುವುದಾದರೆ ಮೊದಲು ಆರೆಸ್ಸೆಸ್, ಸಂಘ ಪರಿವಾರವನ್ನು ನಿಷೇಧ ಮಾಡಬೇಕು ಎಂದು ಅವರು ಅಗ್ರಹಿಸಿದರು.
ಹತ್ಯಾಕಾಂಡ, ಗಲಭೆ, ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿ ಜೈಲಿನಲ್ಲಿ ಇರಬೇಕಾದ ಬಿಜೆಪಿ, ಆರೆಸ್ಸೆಸ್, ಸಂಘ ಪರಿವಾರದ ನಾಯಕರು ದೇಶವನ್ನು ಆಡಳಿತ ಮಾಡುತ್ತಿದ್ದಾರೆ. ಅವರ ವಿರುದ್ಧ ಗಟ್ಟಿ ದ್ವನಿಯಾದ ಪಿ.ಎಫ್.ಐ., ಎಸ್.ಡಿ.ಪಿ.ಐ. ಅನ್ನು ಎನ್.ಐ.ಎ., ಇಡಿ ಮೊದಲಾದ ತನಿಖಾ ಸಂಸ್ಥೆಗಳನ್ನು ತನ್ನ ಕೈಗೊಂಬೆಯಂತೆ ಮಾಡಿ ಹೆದರಿಸುವ, ಬೆದರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇವೆಲ್ಲವು ವ್ಯರ್ಥ ಪ್ರಯತ್ನಗಳಾಗಿವೆ ಎಂದು ಅವರು ಹೇಳಿದರು.

- Advertisement -

ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮುನೀಶ್ ಅಲಿ ಮಾತನಾಡಿ, ಪಿ.ಎಫ್.ಐ. ನಾಯಕರ ಬಂಧನ ಕೇವಲ ರಾಜಕೀಯ ಪ್ರೇರಿತ ಬೇಟೆಯಾಗಿದೆ. ಇದಕ್ಕೆ ಕೆಲವು ಮಾಧ್ಯಮಗಳು ನಾಗಪುರದ ಕಚೇರಿಯಲ್ಲಿ ತಯಾರಾದ ಸ್ಕ್ರಿಪ್ಟ್ ಅನ್ನು ಸುದ್ದಿಯ ರೂಪದಲ್ಲಿ ಪ್ರಕಟಿಸುತ್ತಿವೆ. ಫ್ಯಾಶಿಸ್ಟ್ ವಿರುದ್ಧದ ಪಿ.ಎಫ್.ಐ., ಎಸ್.ಡಿ.ಪಿ.ಐ.ಯ ಹೋರಾಟದ ಬಗ್ಗೆ ಜನರ ದಾರಿ ತಪ್ಪಿಸಲು ಎಲ್ಲಾ ದುಷ್ಟ ಶಕ್ತಿಗಳು ಏಕ ರೂಪದಲ್ಲಿ ಶ್ರಮಿಸುತ್ತಿದೆ ಎಂದರು.


ದೇಶದ ಇತಿಹಾಸದಲ್ಲಿ ಎಂದೂ ಮರೆಯಲಾಗದ ಭೀಕರ ಹತ್ಯಾಕಾಂಡ, ಬಾಂಬ್ ಸ್ಫೋಟ, ಗುಂಪು ಹತ್ಯೆ, ದಲಿತ ಬಾಲಕಿಯರ ಅತ್ಯಾಚಾರ, ಕೊಲೆ, ಮರ್ಯಾದೆ ಹತ್ಯೆ, ಕ್ರೈಸ್ತರ ಪ್ರಾಥನಾ ಮಂದಿಗಳಿಗೆ ದಾಳಿ ನಡೆಸಿದ ಆರೆಸ್ಸೆಸ್ ಮತ್ತು ಸಂಘ ಪರಿವಾರದ ಕಚೇರಿ, ಮನೆಗಳಿಗೆ ದಾಳಿ ನಡೆಸದ ಎನ್.ಐ.ಎ., ಕೊರೋನ, ಪ್ರವಾಹ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜನರಿಗೆ ನೆರವಾಗುತ್ತಿರುವ, ದಲಿತರು, ಅಲ್ಪಸಂಖ್ಯಾತರ ಹಕ್ಕುಗಳಿಗೆ ಹೋರಾಟ ಮಾಡುವ ಪಿ.ಎಫ್.ಐ. ನಾಯಕರ ಮೇಲೆ ದಾಳಿ ನಡೆಸಿ ಬಂಧಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದ ಪ್ರಮುಖರಾದ ಖಲಂದರ್ ಪರ್ತಿಪಾಡಿ, ಶಾಕಿರ್ ಅಲಕೆಮಜಲು, ಯೂಸುಫ್ ಆಲಡ್ಕ, ಮುನೀಶ್ ಅಲಿ, ಶಾಹುಲ್ ಹಮೀದ್ ಎಸ್.ಎಚ್., ಶರೀಫ್ ವಲವೂರ್, ಇದ್ರೀಶ್ ಉಪಸ್ಥಿತರಿದ್ದರು. ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.



Join Whatsapp