ಉ.ಪ್ರದೇಶ: ಪ್ರಾಂಶುಪಾಲರ ಮೇಲೆ ಫೈರಿಂಗ್ ಮಾಡಿ ಪರಾರಿಯಾದ 12 ನೇ ತರಗತಿ ವಿದ್ಯಾರ್ಥಿ!

Prasthutha|

ಲಖನೌ: 12ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ನಡುವಿನ ಜಗಳವು ತಾರಕಕ್ಕೇರಿದ್ದು, ಈ ಕುರಿತು ಪ್ರಾಂಶುಪಾಲರು ಬೈದದಕ್ಕಾಗಿ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಸೀತಾಪುರದ ಜಹಾಂಗೀರಾಬಾದ್ ಪಟ್ಟಣದ ಆದರ್ಶ ರಾಮ್ ಸ್ವರೂಪ್ ಶಾಲೆಯಲ್ಲಿ ನಡೆದಿದೆ.

- Advertisement -

ಪ್ರಾಂಶುಪಾಲ ರಾಮ್ ಸಿಂಗ್ ವರ್ಮಾ ಮೇಲೆ ವಿದ್ಯಾರ್ಥಿಯೊಬ್ಬ ಮೂರು ಸುತ್ತು ಗುಂಡು ಹಾರಿಸಿದ್ದು, ಮೂರು ಗುಂಡುಗಳೂ ಅವರಿಗೆ ತಗುಲಿದೆ ಎನ್ನಲಾಗಿದೆ. ಬಳಿಕ ಜಿಲ್ಲಾ ಪೊಲೀಸರು ಸ್ಥಳಕ್ಕೆ ತಲುಪಿ, ತೀವ್ರ ರಕ್ತಸ್ರಾವದಲ್ಲಿದ್ದ ಪ್ರಾಂಶುಪಾಲರನ್ನು ಬಿಸ್ವಾದಲ್ಲಿನ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಪ್ರಾಂಶುಪಾಲರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಸಿಎಚ್ಸಿ ವೈದ್ಯರು ಅವರನ್ನು ಸೀತಾಪುರ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡಿದ್ದು, ಅಲ್ಲಿಂದ ಅವರನ್ನು ಲಕ್ನೋ ಟ್ರಾಮಾ ಸೆಂಟರ್ಗೆ ಸಾಗಿಸಲಾಯಿತು.

- Advertisement -

ಶುಕ್ರವಾರ, ರೇವಾನ್ ಗ್ರಾಮದ ವಿದ್ಯಾರ್ಥಿ ಗುರ್ವಿಂದರ್ ಸಿಂಗ್ ಎಂಬಾತ ತರಗತಿಯಲ್ಲಿನ ಆಸನ ವ್ಯವಸ್ಥೆ ಬಗ್ಗೆ ಇನ್ನೊಬ್ಬ ವಿದ್ಯಾರ್ಥಿ ರೋಹಿತ್ ಮೌರ್ಯ ಎಂಬಾತನೊಂದಿಗೆ ಮಾತಿನ ಚಕಮಕಿ ನಡೆಸಿದ್ದನು. ಇಬ್ಬರೂ ವಿದ್ಯಾರ್ಥಿಗಳು ಮುಷ್ಟಿ ಕಾಳಗದಲ್ಲಿ ತೊಡಗಿರುವುದನ್ನು ನೋಡಿದ ಪ್ರಾಂಶುಪಾಲರು ಮಧ್ಯಪ್ರವೇಶಿಸಿ, ವಿದ್ಯಾರ್ಥಿಗಳಿಗೆ ಬೈದಿದ್ದರು ಎನ್ನಲಾಗಿದೆ.

ಈ ಘಟನೆ ನಡೆದ ಮರುದಿನ ಶನಿವಾರ ಬೆಳಿಗ್ಗೆ, ಪ್ರಾಂಶುಪಾಲ ರಾಮ್ ಸಿಂಗ್ ವರ್ಮಾ ಅವರು ಕಾಲೇಜು ಆವರಣದ ಹೊರಗೆ ಅಂಗಡಿಯೊಂದರಲ್ಲಿ ಸ್ಟಾಕ್ ತೆಗೆದುಕೊಳ್ಳುತ್ತಿದ್ದಾಗ, ಗುರ್ವಿಂದರ್ ತನ್ನ ಚೀಲದಲ್ಲಿ ಗನ್ನು ಹಿಡಿದುಕೊಂಡು ಕಾಲೇಜಿಗೆ ಬಂದಿದ್ದು, ಅದನ್ನು ಹೊರತೆಗೆದು ಪ್ರಾಂಶುಪಾಲರ ಮೇಲೆ ಗುಂಡು ಹಾರಿಸಿ ಪರಾರಿಯಾದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಪರಾಧಿಯ ಹುಡುಕಾಟ ನಡೆಯುತ್ತಿದೆ ಎಂದು ಸ್ಟೇಷನ್ ಅಧಿಕಾರಿ ಪ್ರದೀಪ್ ಸಿಂಗ್ ಹೇಳಿದ್ದು, ಈ ವಿದ್ಯಾರ್ಥಿಯು ಸಂಗ್ರಹಿಸಿದ ಆಯುಧದ ಮೂಲವನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಸಹ ವಿಚಾರಣೆ ನಡೆಸುತ್ತಿದ್ದಾರೆ. ಅಪರಾಧಿಯ ಕುಟುಂಬ ಮತ್ತು ಅವನ ಇತರ ಸಂಬಂಧಿಕರನ್ನು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.



Join Whatsapp