ಚೆನ್ನೈ: 2023ರ ಆವೃತ್ತಿಯ ಐಪಿಎಲ್‌ನಲ್ಲಿ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಊಹಾಪೋಹಕ್ಕೆ ಸಿಎಸ್‌ಕೆ ಫ್ರಾಂಚೈಸಿ ತೆರೆ ಎಳೆದಿದೆ.
ʻರವೀಂದ್ರ ಜಡೇಜಾರನ್ನು ತಂಡದಿಂದ ಬಿಡುಗಡೆಗೊಳಿಸುವ ಯಾವುದೇ ಯೋಜನೆಯನ್ನು ನಾವು ಹೊಂದಿಲ್ಲ’ ಎಂದು ಸಿಎಸ್‌ಕೆ ಫ್ರಾಂಚೈಸಿ ಸ್ಪಷ್ಟಪಡಿಸಿದೆ. ಜಡೇಜಾ ಚೆನ್ನೈ ತಂಡವನ್ನು ತೊರೆಯುತ್ತಾರೆ ಎಂಬ ಸುದ್ದಿಯ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್, ಟ್ರೇಡ್ ಮೂಲಕ ಜಡೇಜಾರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನ ನಡೆಸಿತ್ತು. ಆದರೆ ಡಿಸಿ ಪ್ರಸ್ತಾಪವನ್ನು ಸಿಎಸ್‌ಕೆ ತಿರಸ್ಕರಿಸಿದೆ. ʻಆತ, ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬʼ ಎಂದು ಸಿಎಸ್‌ಕೆ ಹೇಳಿರುವುದಾಗಿ ಪ್ರಮುಖ ಕ್ರೀಡಾ ವೆಬ್‌ಸೈಟ್ ಕ್ರಿಕ್‌ಬಝ್ ವರದಿ ಮಾಡಿದೆ.
ಜಡೇಜಾ ಸೇರಿದಂತೆ ಗುಜರಾತ್ ಟೈಟನ್ಸ್ ಆಟಗಾರರಾದ ಸ್ಪಿನ್ನರ್ ಸಾಯಿ ಕಿಶೋರ್ ಮತ್ತು ಆಲ್‌ರೌಂಡರ್ ರಾಹುಲ್ ತೆವಾಟಿಯಾ ಅವರಿಗೆ ಕೆಲ ಫ್ರಾಂಚೈಸಿ ಟ್ರೇಡ್ ಆಫರ್ ನೀಡಿತ್ತು. ಹಾಲಿ ಚಾಂಪಿಯನ್ನರು ಇಬ್ಬರು ಆಟಗಾರರನ್ನು ಬಿಟ್ಟುಕೊಡಲು ಒಪ್ಪಿಲ್ಲ ಎಂದು ಕ್ರಿಕ್‌ಬಝ್ ಹೇಳಿದೆ.
ಐಪಿಎಲ್‌ನ 15ನೇ ಆವೃತ್ತಿಯ ಆರಂಭದಲ್ಲಿ ಜಡೇಜಾರನ್ನು ಚೆನ್ನೈ ತಂಡದ ನಾಯಕನಾಗಿ ನೇಮಿಸಲಾಗಿತ್ತು. ಆದರೆ ಆದರೆ ಟೂರ್ನಿಯ ಆರಂಭದ 8 ಪಂದ್ಯಗಳಲ್ಲಿ ತಂಡವು 6 ಸೋಲು ಕಂಡ ಪರಿಣಾಮ ಜಡೇಜಾರನ್ನು ಕೆಳಗಿಳಿಸಿ, ಮತ್ತೆ ಎಂಎಸ್ ಧೋನಿಗೆ ನಾಯಕನ ಪಟ್ಟ ಕಟ್ಟಲಾಗಿತ್ತು. 2023ರಲ್ಲೂ ಧೋನಿ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದು ಚೆನ್ನೈ ತಂಡದ ಸಿಇಒ ಕಾಶಿ ವಿಶ್ವನಾಥನ್ ಇತ್ತೀಚೆಗೆ ಸ್ಪಷ್ಟಪಡಿಸಿದ್ದರು.
ಚೆನ್ನೈ ತಂಡದ ಆಡಳಿತ ಮಂಡಳಿಯ ನಿರ್ಧಾರದಿಂದಾಗಿ ಜಡೇಜಾ ತೀವ್ರ ಅಸಮಾಧಾನಗೊಂಡಿದ್ದರು. ನಾಯಕತ್ವ ತೊರೆಯುತ್ತಲೇ ಗಾಯದ ಕಾರಣ ನೀಡಿ ಜಡೇಜಾ, ತಂಡದಿಂದ ಹೊರಗುಳಿದಿದ್ದರು. ಆದರೆ ಈ ಬಾರಿಯ ಐಪಿಎಲ್ ಮುಕ್ತಾಯಗೊಂಡ ಬಳಿಕ ಸಿಎಸ್‌ಕೆ ಆಡಳಿತ ಮಂಡಳಿಯ ಜೊತೆ ರವೀಂದ್ರ ಜಡೇಜಾ ಯಾವುದೇ ಸಂಪರ್ಕ ಹೊಂದಿರಲಿಲ್ಲ. ಸಾಮಾಜಿಕ ಜಾಲತಾಣದ ತಮ್ಮ ಖಾತೆಗಳಲ್ಲಿದ್ದ ಸಿಎಸ್‌ಕೆ ತಂಡಕ್ಕೆ ಸಂಬಂಧಿಸಿದ ಎಲ್ಲ ಪೋಸ್ಟ್ಗಳನ್ನು ಜಡೇಜಾ ಡಿಲೀಟ್ ಮಾಡಿದ್ದರು. ಈ ಎಲ್ಲ ಕಾರಣಗಳಿಂದಾಗಿ ಜಡೇಜಾ, ಚೆನ್ನೈ ತಂಡವನ್ನು ತೊರೆಯುವುದು ಬಹುತೇಕ ಖಚಿತ ಎಂದೇ ಹೇಳಲಾಗಿತ್ತು.