ಮುಂಬೈ: ಭಾರತೀಯ ಕ್ರಿಕೆಟ್ ಬೋರ್ಡ್, ಬಿಸಿಸಿಐಯ ವಾರ್ಷಿಕ ಮಹಾಸಭೆ ಅಕ್ಟೋಬರ್ 18ರಂದು ನಿಗದಿಯಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮತ್ತು ಪದಾಧಿಕಾರಿಗಳ ಸ್ಥಾನಕ್ಕೆ ಅದೇ ದಿನ ಚುನಾವಣೆ ನಡೆಯಲಿದೆ.
ಸಂಸ್ಥೆಯ ಸಂವಿಧಾನದಲ್ಲಿ ಕೆಲ ಬದಲಾವಣೆ ಕೋರಿ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಪುರಸ್ಕರಿಸಿತ್ತು ಈ ಹಿನ್ನಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರ ಅಧಿಕಾರವಧಿ ಮುಂದುವರಿಯಲು ಇದ್ದ ತೊಡಕು ನಿವಾರಣೆಯಾಗಿದೆ.
ಆದರೆ ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ , ಐಸಿಸಿ ಅಧಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬಿಸಿಸಿಐಗೆ ಜಯ್ ಶಾ ಅಧ್ಯಕ್ಷರಾಗಬಹುದು ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಇದಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಬೆಂಬಲವೂ ಇದೆ ಎನ್ನಲಾಗಿದೆ.
ವಾರ್ಷಿಕ ಮಹಾಸಭೆಯಲ್ಲಿ ಐಸಿಸಿಗೆ ಬಿಸಿಸಿಐ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸದ್ಯ ಸೌರವ್ ಗಂಗೂಲಿ ಮತ್ತು ಜಯ್ ಶಾ, ಐಸಿಸಿಯಲ್ಲಿ ಬಿಸಿಸಿಐನ್ನು ಪ್ರತಿನಿಧಿಸುತ್ತಿದ್ದಾರೆ. ಇದಲ್ಲದೆ, ಒಂಬುಡ್ಸ್ಮನ್ ಮತ್ತು ನೈತಿಕ ಅಧಿಕಾರಿಯ ನೇಮಕ, ಕ್ರಿಕೆಟ್ ಸಮಿತಿ ಮತ್ತು ಸ್ಥಾಯಿ ಸಮಿತಿಯ ನೇಮಕಾತಿ ಮತ್ತು ಅಂಪೈರ್ಗಳ ಸಮಿತಿಯ ನೇಮಕವು ಸಭೆಯ ಇತರ ಅಜೆಂಡಾಗಳಲ್ಲಿ ಸೇರಿದೆ.
ವಾರ್ಷಿಕ ಮಹಾಸಭೆಯ ದಿನದಂದೇ ಪದಾಧಿಕಾರಿಗಳ ಚುನಾವಣೆ ಕುರಿತು ಬಿಸಿಸಿಐ ಅಧಿಕೃತವಾಗಿ ಏನನ್ನೂ ಪ್ರಕಟಿಸಿಲ್ಲ. ಆದರೆ ಸಭೆಯ ಕುರಿತು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಪತ್ರ ಬರೆದಿರುವ ಜಯ್ ಶಾ, ಚುನಾವಣೆ ನಡೆಯುವ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿಗಳ ಅವಧಿ ಸೆಪ್ಟೆಂಬರ್ ಅಂತ್ಯಕ್ಕೆ ಮುಗಿಯಲಿದೆ. ಸೆಪ್ಟಂಬರ್ 14ರಂದು ಸರ್ವೋಚ್ಚ ನ್ಯಾಯಾಲಯ ನೀಡಿದ್ದ ಆದೇಶದಲ್ಲಿ ಕಡ್ಡಾಯ ವಿಶ್ರಾಂತಿ ನಿಯಮವನ್ನು ಸತತ 6 ವರ್ಷಗಳ ಅಧಿಕಾರಾವಧಿ ಬದಲು, ಸತತ 12 ವರ್ಷಗಳಿಗೆ ಏರಿಸಿತ್ತು.