ಗೋದಾಮಿನಲ್ಲಿದ್ದ 900 ಚೀಲ ರಸಗೊಬ್ಬರ ಕಳವು

Prasthutha|

ಬೆಳಗಾವಿ: ಗೂಡ್ಸ್ ರೈಲು ಡಂಪಿಂಗ್ ಸ್ಟೇಷನ್ ಗೋದಾಮಿನಲ್ಲಿ ಸಂಗ್ರಹಿಸಿದ್ದ 12 ಲಕ್ಷ ಮೌಲ್ಯದ 900 ಚೀಲ ರಸಗೊಬ್ಬರವನ್ನು ದುಷ್ಕರ್ಮಿಗಳು ಕಳವು ಮಾಡಿ  ಪರಾರಿಯಾದ ಘಟನೆ ತಾಲೂಕಿನ ದೇಸೂರಿನಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.

- Advertisement -

ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಕಳ್ಳರು ಆರ್‌ಸಿಎಫ್‌, ಡಿಎಪಿ ಗೊಬ್ಬರವನ್ನು ಎಗರಿಸಿದ್ದು,  ಗೊತ್ತಿದ್ದವರಿಂದಲೇ ಈ ಕೃತ್ಯ ನಡೆದಿದೆ ಎಂಬ ಅನುಮಾನ ಮೂಡಿದೆ. ಈ ಬಗ್ಗೆ ಸಾಗರ್ ಟ್ರಾನ್ಸ್‌ಪೋರ್ಟ್ ನ  ಮ್ಯಾನೇಜರ್ ಶಿವಾಜಿ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಸಾಮಾನ್ಯವಾಗಿ ಬೆಳಗ್ಗೆ 6 ರಿಂದ ಸಂಜೆ 7ರವರೆಗೆ ಇಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಾರೆ. ಗೂಡ್ಸ್ ರೈಲಿನಿಂದ ಸರಕು ಇಳಿಸಿ ಲೋಡ್ ಮಾಡಿ ಅಂದಿನ ಕೂಲಿ ಹಣ ಪಡೆದು ವಾಪಸ್ ಹೋಗುತ್ತಾರೆ. ರಾತ್ರಿ ವೇಳೆ ಗೋದಾಮಿನ ಬಳಿ ಯಾರೂ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ರಸಗೊಬ್ಬರ ಎತ್ತಂಗಡಿ ಮಾಡಿ  ಪರಾರಿಯಾಗಿದ್ದಾರೆ‌.

- Advertisement -

ರೈಲ್ವೆ ಪೊಲೀಸರು ಬೆಳಗ್ಗೆ ಹಾಗೂ ರಾತ್ರಿ ಗಸ್ತು ತಿರುಗುತ್ತಾರೆ. ಇಲ್ಲಿ ಸರಿಯಾದ ಭದ್ರತೆ ವ್ಯವಸ್ಥೆ ಇಲ್ಲ. ಸಿಸಿ ಕ್ಯಾಮರಾಗಳ ವ್ಯವಸ್ಥೆಯೂ ಸರಿಯಾಗಿಲ್ಲ ಎಂದು ಸಿಬ್ಬಂದಿ ತಿಳಿಸಿದರು. ಗೋದಾಮು ಮ್ಯಾನೇಜರ್ ಶಿವಾಜಿಯವರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡದೆ ಬೆಳಗಾವಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದು ಅನುಮಾನ ವ್ಯಕ್ತವಾಗುತ್ತಿದೆ. ದೇಸೂರು ಗ್ರಾಮ ಬೆಳಗಾವಿ ಗ್ರಾಮೀಣ ಠಾಣೆ ವ್ಯಾಪ್ತಿಗೆ ಬರುವುದರಿಂದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Join Whatsapp