ಕಲಬುರಗಿ: ಚಿಕ್ಕಮಕ್ಕಳಲ್ಲೂ ಹೃದಯಾಘಾತಗಳು ಹೆಚ್ಚುಗುತ್ತಿದ್ದು, ಕರ್ನಾಟಕದಲ್ಲಿಯೂ ಶಾಲೆಯಲ್ಲೇ ಮಕ್ಕಳು ಕುಸಿದು ಬಿದ್ದು ಸಾವನ್ನಪ್ಪಿದ ಪ್ರಕರಣಗಳು ನಡೆದಿವೆ. ಹೀಗಿರುವಾಗಲೇ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಪುಟ್ಟ ಶಾಲಾ ಮಕ್ಕಳಲ್ಲಿ ಹೆಚ್ಚು ಹೃದಯ ಸಂಬಂದಿ ಕಾಯಿಲೆ ಇರುವುದು ಪತ್ತೆಯಾಗಿದೆ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನಲ್ಲಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಮಾಡಿದಾಗ ತಾಲ್ಲೂಕಿನಲ್ಲಿ 90 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ ಇರುವುದು ಪತ್ತೆಯಾಗಿದೆ.
ವಾರ್ಷಿಕ ಪರೀಕ್ಷೆಗೂ ಮೊದಲು ಶಾಲೆಗಳಿಗೆ ಹೋಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಕ್ಕಳ ಆರೋಗ್ಯ ಪರೀಕ್ಷೆ ಮಾಡುತ್ತಾರೆ.. ಅದೇ ರೀತಿ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನಲ್ಲಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಕೈಗೊಳ್ಳಲಾಗಿತ್ತು. ಈ ವೇಳೆ ಈ ತಾಲ್ಲೂಕಿನಲ್ಲಿ 90 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ ಇರುವುದು ಪತ್ತೆಯಾಗಿದೆ.
ಸ್ವಸ್ಥ ಕಾರ್ಯಕ್ರಮದ ಅಡಿ ಈ ಶಿಬಿರ ಏರ್ಪಡಿಸಲಾಗಿತ್ತು. ಅಂಗನವಾಡಿ ಮಕ್ಕಳು, ಪ್ರಾಥಮಿಕ ಶಾಲಾ ಮಕ್ಕಳು, ಪ್ರೌಢ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ವೇಳೆ 170 ಮಕ್ಕಳ ಪೈಕಿ 90 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ ಪತ್ತೆಯಾಗಿದೆ. ಆ 90 ಮಕ್ಕಳ ಪೈಕಿ 41 ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಾಗಿದೆ. ಇನ್ನುಳಿದ ಮಕ್ಕಳಿಗೆ ಔಷದೋಪಚಾರದ ಮೂಲಕ ಗುಣಪಡಿಸಬಹುದಾಗಿದೆ ಎಂದು ಪರೀಕ್ಷಿಸಿದ ವೈದ್ಯರು ಹೇಳಿದ್ದಾರೆ
ಹೆಚ್ಚು ಮಂದಿಗೆ ಹೃದಯ ರಂಧ್ರ ಸಮಸ್ಯೆ ಇದ್ದು, ಬೆಂಗಳೂರಿನ ವೈದೇಹಿ ಆಸ್ಪತ್ರೆ ಹೃದಯದಲ್ಲಿನ ರಂಧ್ರ ಸಮಸ್ಯೆಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಲು ಮುಂದೆ ಬಂದಿದೆ ಎಂದು ತಿಳಿದು ಬಂದಿದೆ.