ಆರೋಪ ನಿಗದಿಪಡಿಸದೆ ಯುಎಪಿಎ ಅಡಿ 9 ವರ್ಷ ಬಂಧನ: ಅರ್ಜಿ ಇತ್ಯರ್ಥಕ್ಕೆ ಗಡುವು ನೀಡಿದ ದೆಹಲಿ ಹೈಕೋರ್ಟ್

Prasthutha|

ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಬಂಧನದಲ್ಲಿರುವ ಆರೋಪಿಯ ಜಾಮೀನು ಅರ್ಜಿಯನ್ನು 75 ದಿನಗಳಲ್ಲಿ ನಿರ್ಧರಿಸುವಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

- Advertisement -

ಆರೋಪಿ ಮಂಜೇರ್ ಇಮಾಮ್ ವಿರುದ್ಧ ಒಂಬತ್ತು ವರ್ಷಗಳಿಂದ ಯಾವುದೇ ದೋಷಾರೋಪ ನಿಗದಿಪಡಿಸದೆ ಜೈಲಿನಲ್ಲಿರಿಸಲಾಗಿತ್ತು. ಆರೋಪಿ ಇನ್ನೂ ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸದ ಕಾರಣ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರು ತಮ್ಮ ಮುಂದೆ ಬಾಕಿ ಇರುವ ಜಾಮೀನು ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದರು.

ಹೀಗಾಗಿ ಅರ್ಜಿ ಹಿಂಪಡೆದು ಜಾಮೀನಿಗಾಗಿ ವಿಶೇಷ ನ್ಯಾಯಾಲಯವನ್ನು ಸಂಪರ್ಕಿಸಲು ಮನವಿದಾರನಿಗೆ ಸ್ವಾತಂತ್ರ್ಯ ನೀಡಲಾಯಿತು.

- Advertisement -

ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹಿಸುವ, ವ್ಯಕ್ತಿಗಳನ್ನು ನೇಮಿಸುವ ಮತ್ತು ಪ್ರಭುತ್ವದ ವಿರುದ್ಧ ಸಮರ ಸಾರುತ್ತಿರುವ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ (ಐಎಂ) ಕಾರ್ಯಕರ್ತ ಎಂಬ ಆರೋಪದ ಮೇಲೆ 2013 ರಲ್ಲಿ ಇಮಾಮ್ ನನ್ನು ಎನ್ ಐಎ ಬಂಧಿಸಿತ್ತು. ಭಯೋತ್ಪಾದಕ ಸಂಘಟನೆಯ ಸದಸ್ಯತ್ವ ಹೊಂದಿರುವುದು ಮತ್ತು ಕ್ರಿಮಿನಲ್ ಪಿತೂರಿಯ ಆರೋಪಗಳನ್ನು ಆತನ ವಿರುದ್ಧ ನಿಗದಿಪಡಿಸಲಾಗಿತ್ತು.

ಜಾಮೀನು ಪಡೆಯಲು ವಿಚಾರಣಾ ನ್ಯಾಯಾಲಯವನ್ನು ಅರ್ಜಿದಾರ ಸಂಪರ್ಕಿಸಬೇಕು ಎಂದು ಎನ್ ಐಎ ಪರ ವಕೀಲರು ವಾದಿಸಿದ ನಂತರ ಅರ್ಜಿಯನ್ನು ಹಿಂಪಡೆಯಲಾಯಿತು. ಆದರೆ ದೀರ್ಘಾವಧಿ ಸೆರೆವಾಸ ಪರಿಗಣಿಸಿ ಅರ್ಜಿ ಇತ್ಯರ್ಥಪಡಿಸಲು ವಿಚಾರಣಾ ನ್ಯಾಯಾಲಯಕ್ಕೆ ಗಡುವು ನಿಗದಿಪಡಿಸುವಂತೆ ಅರ್ಜಿದಾರರು ಪೀಠವನ್ನು ಕೋರಿದರು. ಇದನ್ನು ಪುರಸ್ಕರಿಸಿದ ಹೈಕೋರ್ಟ್‌ ತ್ವರಿತವಾಗಿ ಪ್ರಕರಣ ಆಲಿಸಿ ವಿಲೇವಾರಿ ಮಾಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತು.

(ಕೃಪೆ: ಬಾರ್ & ಬೆಂಚ್)

Join Whatsapp