ಬೆಂಗಳೂರು: 2022ರ ಏಪ್ರಿಲ್/ ಮೇ ತಿಂಗಳಲ್ಲಿ ನಡೆದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪಕ, ಸಹಾಯಕ ಮೌಲ್ಯ ಮಾಪಕ, ಉಪಮುಖ್ಯ ಮೌಲ್ಯ ಮಾಪಕ, ಮರುಮೌಲ್ಯ ಮಾಪಕರಾಗಿದ್ದ ಸಂದರ್ಭದಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಸರ್ಕಾರಿ ಪಿಯು ಕಾಲೇಜುಗಳ ಒಂಬತ್ತು ಅಧ್ಯಾಪಕರನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.
ಅಲ್ಲದೆ, ತಪ್ಪು ಮಾಡಿದ ಖಾಸಗಿ ಅನುದಾನರಹಿತ ಕಾಲೇಜಿನ ಒಬ್ಬ ಬೋಧಕನ ವಿರುದ್ಧ ಶಿಸ್ತು ಕ್ರಮಕ್ಕೆ ಇಲಾಖೆ ನಿರ್ದೇಶನ ನೀಡಿದೆ.
ಪ್ರಕ್ರಿಯೆಯನ್ನು ಎದುರಿಸುತ್ತಿರುವ 10 ಅಧ್ಯಾಪಕರ ಪೈಕಿ, ತಲಾ ಐವರು ಭೌತಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳಿಗೆ ಸಂಬಂಧಿಸಿದ್ದಾಗಿದೆ. ಉತ್ತರ ಪತ್ರಿಕೆಯ ಕೊನೆಯ ಪುಟಗಳನ್ನು ಮರು ಮೌಲ್ಯಮಾಪನ ಮಾಡಿಲ್ಲ ಎಂಬ ಆರೋಪದಲ್ಲಿ ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ.
ವಿದ್ಯಾರ್ಥಿಯೊಬ್ಬರ ಇಂಗ್ಲಿಷ್ ವಿಷಯದ ಉತ್ತರ ಪತ್ರಿಕೆಯ ಕೊನೆಯ ಒಂಬತ್ತು ಪುಟಗಳನ್ನು ಮೌಲ್ಯಮಾಪನ ಮಾಡಿಲ್ಲ ಎಂಬ ಆರೋಪದಲ್ಲಿ ಮೌಲ್ಯಮಾಪಕರಾಗಿದ್ದ ಬಸವರಾಜು ನಾಗನಾಥ, ಉಪಮುಖ್ಯ ಮೌಲ್ಯಮಾಪಕರಾಗಿದ್ದ ಪೋಲಾರ್ ಸಿದ್ಧರಾಮ್ ಚಂದ್ರಮ್, ಮರು ಮೌಲ್ಯಮಾಪಕರಾಗಿದ್ದ ಡಿ.ಎ. ಯಾಸ್ಮಿನ್ ಜಹಾ, ಪಿ. ಕರೇಗೌಡ, ಎಸ್.ಸಿ. ದಯಾನಂದ ಎಂಬ ಐವರು ಉಪನ್ಯಾಸಕರನ್ನು ಆರ್. ರಾಮಚಂದ್ರನ್ ಅವರು ಅಮಾನತು ಮಾಡಿದ್ದಾರೆ.
ಮತ್ತೊಬ್ಬ ವಿದ್ಯಾರ್ಥಿಯ ಭೌತವಿಜ್ಞಾನ ವಿಷಯದ ಉತ್ತರ ಪತ್ರಿಕೆಯ ಕೊನೆಯ 7 ಪುಟಗಳನ್ನು ಮರು ಮೌಲ್ಯಮಾಪನ ಮಾಡಿಲ್ಲ ಎಂಬ ಆರೋಪದಲ್ಲಿ, ಆ ವಿಷಯದ ಉಪನ್ಯಾಸಕರಾದ ಕರೂರು ಪ್ರಕಾಶ್, ಬಿ.ಪಿ. ಕಲ್ಲಪ್ಪ, ಎಂ.ಚಂದ್ರಶೇಖರ್, ಉಪಮುಖ್ಯ ಮೌಲ್ಯಮಾಪಕರಾಗಿದ್ದ ಎಂ. ಶಂಕರಪ್ಪ ಎಂಬುವರನ್ನು ಇಲಾಖೆಯ ನಿರ್ದೇಶಕ ಆರ್. ರಾಮಚಂದ್ರನ್ ಅಮಾನತು ಮಾಡಿದ್ದಾರೆ.
ಅದೇ ಉತ್ತರ ಪತ್ರಿಕೆಗೆ ಸಹಾಯಕ ಮೌಲ್ಯಮಾಪಕರಾಗಿದ್ದ ಖಾಸಗಿ ಅನುದಾನರಹಿತ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಎಂ.ಪಿ. ಶ್ರುತಿ ವಿರುದ್ಧ ಶಿಸ್ತುಕ್ರಮ ತೆಗೆದುಕೊಂಡು, ಆ ಬಗ್ಗೆ 15 ದಿನಗಳ ಒಳಗೆ ವರದಿ ನೀಡುವಂತೆ ಆಡಳಿತ ಮಂಡಳಿಗೆ ನಿರ್ದೇಶನ ನೀಡಿದ್ದಾರೆ.
‘ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳಿಗೆ ಇಲಾಖೆಯ ನಿರ್ದೇಶಕರೇ ಶಿಸ್ತು ಪ್ರಾಧಿಕಾರಿ. ಹೀಗಾಗಿ, ಅವರು ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಈ ಕಾಲೇಜುಗಳ ಉಪನ್ಯಾಸಕರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದರು. ಅದಕ್ಕೆ ಉಪನ್ಯಾಸಕರು ಲಿಖಿತ ಸಮಜಾಯಿಷಿಯನ್ನೂ ನೀಡಿದ್ದರು. ಆದರೆ, ಅದನ್ನು ಒಪ್ಪದೆ, ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.