ಅಕ್ರಮ ವಲಸಿಗರಿಗೆ ಆಧಾರ್ ಕಾರ್ಡ್ ಪೂರೈಕೆ ಆರೋಪ: 9 ಮಂದಿ ಪೊಲೀಸ್ ವಶಕ್ಕೆ

Prasthutha|

ಬೆಂಗಳೂರು: ಕೆಲವು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಲೆ ತಪ್ಪಿಸಿಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದ ಭಯೋತ್ಪಾದಕನೊಬ್ಬನ್ನು ಬಂಧಿಸಿದ ಘಟನೆಯ ಬೆನ್ನ ಹಿಂದೆಯೇ, ನಗರ ಪೊಲೀಸರು ಅಕ್ರಮ ಬಾಂಗ್ಲಾದೇಶಿ ನುಸುಳುಕೋರರಿಗೆ ಆಧಾರ್ ಕಾರ್ಡ್ ಹಾಗೂ ಇನ್ನಿತರ ದಾಖಲೆಗಳನ್ನು ಒದಗಿಸುತ್ತಿದ್ದ ಜಾಲವೊಂದನ್ನು ಭೇದಿಸಿದ್ದಾರೆ.
ಅಧಿಕೃತ ಮಾಹಿತಿಗಳ ಪ್ರಕಾರ, ಈ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು ಹಲವರನ್ನು ಬಂಧಿಸಿ, ದಾಖಲೆಗಳನ್ನು ಅಕ್ರಮ ವಲಸಿಗರಿಗೆ ಪೂರೈಸುತ್ತಿದ್ದ ಒಂಬತ್ತು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ಬೆಂಗಳೂರು ನಗರ ಸರಹದ್ದಿನ ಪ್ರದೇಶವೊಂದರಲ್ಲಿ ಎಟಿಎಂ ಜತೆಗೆ 18 ಲಕ್ಷ ರೂಪಾಯಿಗಳ ಲೂಟಿ ಪ್ರಕರಣ ನಡೆದಿದ್ದು ಈ ಸಂಬಂಧ, ಅಕ್ರಮ ಬಾಂಗ್ಲಾದೇಶಿ ನಾಗರಿಕೊಬ್ಬನನ್ನು ಬಂಧಿಸಲಾಗಿತ್ತು.
ವಿಚಾರಣೆಯ ಸಂದರ್ಭದಲ್ಲಿ ನಕಲಿ ದಾಖಲೆಗಳನ್ನು ಒದಗಿಸುವ ಜಾಲದ ಬಗ್ಗೆ ಸುಳಿವು ಸಿಕ್ಕಿದ್ದು, ಪೊಲೀಸರು ಸಾಕ್ಷ್ಯಾಧಾರಗಳ ಸಮೇತ ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ. ನಕಲಿ ದಾಖಲೆ ಪಡೆದು, ಬೆಂಗಳೂರಿನಲ್ಲಿ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದ ಅಕ್ರಮ ವಲಸಿಗಾರ ಸುಮಾರು ನಾಲ್ಕು ಕೋಟಿ ರೂಪಾಯಿಗಳನ್ನು ಬಾಂಗ್ಲಾದೇಶಿ ಕರೆನ್ಸಿ ಆಗಿ ಪರಿವರ್ತಿಸಿ ಆ ದೇಶಕ್ಕೆ ಈಗಾಗಲೇ ವರ್ಗಾವಣೆಗೊಳಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಬಂಧಿಸಲ್ಪಟ್ಟ ಆರೋಪಿಗಳಲ್ಲಿ ಒಬ್ಬಾತ ಸಾಫ್ಟ್ ವೇರ್ ಎಂಜಿನಿಯರ್ ಹಾಗೂ ಇನ್ನೊಬ್ಬ ಫಾರ್ಮಸಿಸ್ಟ್ ಆಗಿದ್ದು ಈಗ ಪೊಲೀಸರ ವಶದಲ್ಲಿದ್ದು ತನಿಖೆ ಎದುರಿಸುತ್ತಿದ್ದಾರೆ. ಬಂಧಿಸಲ್ಪಟ್ಟ ಆರೋಪಿಗಳು, ಹಲವು ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು ಇದೀಗ ಪೊಲೀಸರು ಹೆಣೆದ ಬಲೆಗೆ ಬಿದ್ದಿದ್ದು, ಕಾನೂನು ಕ್ರಮ ಎದುರಿಸುತ್ತಿದ್ದಾರೆ. ಈ ಕುರಿತು ಮಾತನಾಡಿದ ಗೃಹ ಸಚಿವರು, ನಗರ ಪೊಲೀಸರನ್ನು ಅಭಿನಂದಿಸಿದ್ದಾರೆ.
“ಅಕ್ರಮ ವಲಸಿಗರು ಹಾಗೂ ಅವರಿಗೆ ಆಶ್ರಯ ಹಾಗೂ ಇನ್ನಿತರ ಸಹಕಾರ ಹಾಗೂ ಸಹಾಯ ಒದಗಿಸುತ್ತಿದ್ದವರ ವಿರುದ್ಧ ತೀವ್ರ ನಿಗಾ ವಹಿಸಬೇಕು ಮತ್ತು ಅಕ್ರಮ ಚಟುವಟಿಕೆಗಳಿಗೆ ನಿಯಂತ್ರಣ ಹೇರಬೇಕು ಎಂದು ನಿರ್ದೇಶನ ನೀಡಿದ್ದೆ. ಅಕ್ರಮ ವಲಸೆ ಸಮಸ್ಯೆಯನ್ನು ನಮ್ಮ ಸರಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಅಕ್ರಮ ನೆಲಸಿಗರು ಮತ್ತು ಅವರಿಗೆ ಆಶ್ರಯ ಹಾಗೂ ಇನ್ನಿತರ ಸಹಕಾರ ಒದಗಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ರಾಜ್ಯದ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿರುವ ವರ ಬಗ್ಗೆ ಸಮೀಕ್ಷೆ ನಡೆಸಿ ಕ್ರಮ ತೆಗೆದುಕೊಳ್ಳಲು ಈಗಾಗಲೆ ನಿರ್ದೇಶನ ನೀಡಲಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ .

Join Whatsapp