ತೆರಿಗೆ ವಂಚಿಸುತ್ತಿದ್ದ ಕಂಪನಿಗಳ ಮೇಲೆ ಐಟಿ ದಾಳಿ: 880 ಕೋಟಿ ರೂ ತೆರಿಗೆ ವಂಚನೆ ಪತ್ತೆ

Prasthutha|

ಬೆಂಗಳೂರು, ಜು.14: ತೆರಿಗೆ ವಂಚಿಸುತ್ತಿದ್ದ ಬೆಂಗಳೂರಿನ ಎರಡು ಕಂಪನಿಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಶೋಧ ನಡೆಸಿ 880 ಕೋಟಿ ರೂಗಳ ತೆರಿಗೆ ವಂಚನೆಯನ್ನು ಪತ್ತೆ ಹಚ್ಚಿದ್ದಾರೆ.

- Advertisement -


ಮಾನವ ಸಂಪನ್ಮೂಲ ಸೇವಾ ಕಂಪನಿಯ ಎರಡು ಕ್ಯಾಂಪಸ್‌ ಗಳ ಮೇಲೆ ಕಳೆದ ಜು. 8ರಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ ಅದು ಯಾವ ಕಂಪನಿ ಎಂಬ ಮಾಹಿತಿಯನ್ನು ಸದ್ಯಕ್ಕೆ ಬಹಿರಂಗವಾಗಿಲ್ಲ.
ಆದಾಯ ತೆರಿಗೆ ಕಾಯ್ದೆಯ 80ಜೆಜೆಎಎ ಪರಿಚ್ಛೇದದಡಿ ಉದ್ಯೋಗಿಗೆ 25 ಸಾವಿರ ರೂ.ಗಿಂತ ಕಡಿಮೆ ಸಂಬಳವನ್ನು ಕಂಪನಿ ನೀಡುತ್ತಿದ್ದರೆ, ಆ ಕಂಪನಿಗೆ ತೆರಿಗೆ ಕಟ್ಟುವುದರಿಂದ ವಿನಾಯಿತಿ ನೀಡಲಾಗುತ್ತದೆ.
ಆಪಾದಿತ ಕಂಪನಿಯ ಮಾಲೀಕ ಇದೇ ಪರಿಚ್ಛೇದವನ್ನು ದುರ್ಬಳಕೆ ಮಾಡಿಕೊಂಡು 880 ಕೋಟಿ ರೂ. ಆದಾಯ ಮುಚ್ಟಿಟ್ಟು, ವಂಚನೆ ಮಾಡಿರುವುದು ದಾಳಿಯಲ್ಲಿ ಪತ್ತೆಯಾಗಿದೆ.


ಈ ಕಂಪನಿಯಲ್ಲಿ ಮಾಸಿಕವಾಗಿ 25 ಸಾವಿರ ರೂ.ಗಿಂತ ಹೆಚ್ಚು ವೇತನ ಪಡೆಯುವ ಹಲವಾರು ಉದ್ಯೋಗಿಗಳಿದ್ದಾರೆ. ಆದರೆ ಈ ಉದ್ಯೋಗಿಗಳಿಗೆ 25 ಸಾವಿರಕ್ಕಿಂತ ಕಡಿಮೆ ಸಂಬಳ ನೀಡುತ್ತಿದ್ದೇವೆ ಎಂದು ಕಂಪನಿಯು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, 80ಜೆಜೆಎಎ ಅಡಿ ತೆರಿಗೆ ವಿನಾಯಿತಿ ಕೊಡಿ ಎಂದು ಆದಾಯ ತೆರಿಗೆ ಇಲಾಖೆಗೆ ಮನವಿ ಸಲ್ಲಿಸಿ ನೂರಾರು ಕೋಟಿ ರೂಪಾಯಿ ತೆರಿಗೆ ಕಟ್ಟದೇ ಉಳಿಸಿಕೊಂಡಿದ್ದು ತಿಳಿದುಬಂದಿದೆ.
ಇದಲ್ಲದೆ, ಇನ್ನೂ ಕೆಲವರು ಈ ಕಂಪನಿಯ ನೌಕರರೇ ಅಲ್ಲದಿದ್ದರೂ, ಅಂಥವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅವರಿಗೂ 25 ಸಾವಿರ ರೂ.ಗಿಂತ ಕಡಿಮೆ ಸಂಬಳ ನೀಡುತ್ತಿರುವುದಾಗಿ ಇಲಾಖೆಗೆ ಮಾಹಿತಿ ನೀಡಲಾಗಿದೆ. ಹಲವಾರು ವರ್ಷಗಳಿಂದ ಈ ಕೃತ್ಯವನ್ನು ಕಂಪನಿ ಎಸಗಿದೆ ಎಂದು ಅಧಿಕಾರಿಗಳಿಗೆ ದಾಳಿ ಸಂದರ್ಭದಲ್ಲಿ ತಿಳಿದುಬಂದಿದೆ.
ಈ ಮೂಲಕ ನಿಜವಾದ 880 ಕೋಟಿ ರೂ. ಆದಾಯ ಮರೆಮಾಚಿ ಅಷ್ಟು ಆದಾಯಕ್ಕೆ ಕಟ್ಟಬೇಕಿದ್ದ ತೆರಿಗೆಯನ್ನು ನೀಡದೆ ವಂಚನೆ ಎಸಗಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ತಿಳಿಸಿದೆ.



Join Whatsapp