ನವದೆಹಲಿ | ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 75ನೇ ಪುಣ್ಯತಿಥಿಯನ್ನು ಇಂದು ದೇಶಾದ್ಯಂತ ಆಚರಿಸಲಾಗಿದ್ದು, ಕೇಂದ್ರ ಸರ್ಕಾರ ಬೆಳಿಗ್ಗೆ 11 ಗಂಟೆಗೆ ಎರಡು ನಿಮಿಷಗಳ ಮೌನ ಪ್ರಾರ್ಥನೆಗೆ ಆದೇಶಿಸಿದೆ.
ಜನವರಿ 30 ಅನ್ನು ದೇಶಾದ್ಯಂತ ಹುತಾತ್ಮರ ದಿನವಾಗಿ ಆಚರಿಸಲಾಗುತ್ತಿದ್ದು, ಮಹಾತ್ಮ ಗಾಂಧಿ ಅವರ 75ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ನಮನ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಾಪು ಅವರ ಪುಣ್ಯ ತಿಥಿಯಂದು ನಾನು ಅವರಿಗೆ ನಮಸ್ಕರಿಸುತ್ತೇನೆ ಮತ್ತು ಅವರ ಆಳವಾದ ಚಿಂತನೆಗಳನ್ನು ನೆನಪಿಸಿಕೊಳ್ಳುತ್ತೇನೆ. ನಮ್ಮ ರಾಷ್ಟ್ರದ ಸೇವೆಯಲ್ಲಿ ಹುತಾತ್ಮರಾದ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆ. ಅವರ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ ಮತ್ತು ಅವು ಅಭಿವೃದ್ಧಿಗಾಗಿ ಕೆಲಸ ಮಾಡುವ ನಮ್ಮ ಸಂಕಲ್ಪವನ್ನು ಬಲಪಡಿಸುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟವನ್ನು ಸಂಘಟಿಸಿದ ಗಾಂಧೀಜಿಯವರು ಭಾರತ ಸ್ವಾತಂತ್ರ್ಯದ ಪ್ರಮುಖ ಪ್ರೇರಕ ಶಕ್ತಿಯಾದರು. ವಿಭಜನೆಯ ನಂತರದ ಹಿಂದೂ-ಮುಸ್ಲಿಂ ಸಂಘರ್ಷಗಳನ್ನು ಕೊನೆಗೊಳಿಸಲು ಗಾಂಧೀಜಿ ಸ್ವಾತಂತ್ರ್ಯಾನಂತರವೂ ಅವಿಶ್ರಾಂತವಾಗಿ ಶ್ರಮಿಸಿದರು. ಈ ಪ್ರಯತ್ನ ಗೋಡ್ಸೆ ಮೂಲಕ ಗಾಂಧೀಜಿಯನ್ನು ನಿರ್ಮೂಲನೆ ಮಾಡಲು ಸಂಘ ಪರಿವಾರಕ್ಕೆ ಪ್ರೇರಣೆ ನೀಡಿತು.
ಮೋಹನದಾಸ್ ಕರಮ್ ಚಂದ್ ಗಾಂಧಿ ಅಕ್ಟೋಬರ್ 2, 1869 ರಂದು ಗುಜರಾತ್ ನ ಪೋರ್ ಬಂದರ್ ನಲ್ಲಿ ಜನಿಸಿದರು. ಜನವರಿ 30, 1948 ರಂದು ಗಾಂಧೀಜಿಯವರು ಸಾಯಂಕಾಲದ ಪ್ರಾರ್ಥನೆಗಾಗಿ ಬಿರ್ಲಾ ಹೌಸ್ ಅಂಗಳಕ್ಕೆ ಬರುತ್ತಿದ್ದಾಗ ಹಿಂದೂ ಮಹಾಸಭಾ ನಾಯಕ ಮತ್ತು ಮಾಜಿ ಆರೆಸ್ಸೆಸ್ ಅನುಯಾಯಿ ನಾಥೂರಾಮ್ ಗೋಡ್ಸೆ ತುಂಬಾ ಹತ್ತಿರದಿಂದ ಅವರ ಎದೆಗೆ ಗುಂಡಿಕ್ಕಿ ಕೊಂದನು.