ಹರಿಯಾಣದ ಖಾಸಗಿ ಉದ್ಯೋಗಗಳಲ್ಲಿ ಶೇ 75 ಸ್ಥಳೀಯ ಮೀಸಲಾತಿ: ಹೈಕೋರ್ಟ್ ತಡೆಯಾಜ್ಞೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

Prasthutha|

ನವದೆಹಲಿ: ಹರಿಯಾಣದಲ್ಲಿ ನೆಲೆಸಿರುವ ವ್ಯಕ್ತಿಗಳಿಗೆ ಖಾಸಗಿ ವಲಯದ ಉದ್ಯೋಗಕ್ಕೆ ಸಂಬಂಧಿಸಿದಂತೆ ಶೇ 75 ರಷ್ಟು ಮೀಸಲಾತಿ ಒದಗಿಸುವ ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯಿದೆ- 2020ಕ್ಕೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ.

- Advertisement -

ಆದರೆ, ಉದ್ಯೋಗದಾತರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹರಿಯಾಣ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಪಿ ಎಸ್ ನರಸಿಂಹ ಅವರಿದ್ದ ಪೀಠ ಇದೇ ಸಂದರ್ಭದಲ್ಲಿ ಸೂಚಿಸಿದೆ. ಕಾಯಿದೆಗೆ ತಡೆ ನೀಡಲು ಪಂಜಾಬ್ ಮತ್ತು ಹರ್ಯಾಣ ನ್ಯಾಯಾಲಯ ಸೂಕ್ತ ಕಾರಣಗಳನ್ನು ನೀಡಿಲ್ಲ ಹೀಗಾಗಿ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.

ನಾಲ್ಕು ರಾಜ್ಯಗಳಲ್ಲಿ ಇಂತಹ ಕಾನೂನು ಜಾರಿಯಲ್ಲಿರುವುದರಿಂದ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸಲು ಕೋರಲಾಗುವುದು ಹೀಗಾಗಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಆದೇಶವನ್ನು ತಡೆ ಹಿಡಿಯಲು ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ ಕೋರಿದರು. ವಲಸಿಗರು ಇತರ ರಾಜ್ಯಗಳಲ್ಲಿ ನೆಲೆಸುವುದನ್ನು ನಿಯಂತ್ರಿಸಲು ಈ ಕಾಯಿದೆಯು ಒಂದು ಸಾಧನವಾಗಿದೆ ಎಂದು ಅವರು ಇದೇ ವೇಳೆ ವಾದಿಸಿದರು.

- Advertisement -

ವಿಚಾರಣೆ ವೇಳೆ ಮಧ್ಯಪ್ರವೇಶಿಸಿದ ಫರಿದಾಬಾದ್ ಇಂಡಸ್ಟ್ರೀಸ್ ಅಸೋಸಿಯೇಷನ್ ಪರ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ದುಶ್ಯಂತ್‌ ದವೆ, ಕಾನೂನನ್ನು ಒಂದು ದಿನದ ಮಟ್ಟಿಗೆ ಜಾರಿಗೆ ತಂದರೂ ಕೂಡ ನ್ಯಾಯಾಲಯ ನಿತ್ಯ ವ್ಯಾಜ್ಯಗಳನ್ನು ಎದುರಿಸಬೇಕಾಗುತ್ತದೆ ಏಕೆಂದರೆ 9 ಲಕ್ಷ ಕಂಪೆನಿಗಳಿವೆ ಎಂದು ತಿಳಸಿದರು. ಇದಕ್ಕೆ ಪೂರಕವಾಗಿ ವಾದ ಮಂಡಿಸಿದ ಮನೇಸರ್‌ ನೌಕರರ ಸಂಘದ ಪರ ವಕೀಲ ಶ್ಯಾಂ ದಿವಾನ್ “ಇದು ವ್ಯವಹಾರದ ಮೇಲೆ ಆಳ ಪರಿಣಾಮ ಬೀರುತ್ತದೆ. ಹೈಕೋರ್ಟ್‌ ವಿಭಾಗೀಯ ಪೀಠ ಸರಿಯಾದ ರೀತಿಯಲ್ಲಿ ಇದನ್ನು ಪರಿಗಣಿಸಿತ್ತು. ಈ ಆದೇಶವನ್ನು (ಸುಪ್ರೀಂ ಕೋರ್ಟ್‌ ಆದೇಶ) ಮಧ್ಯಂತರ ಆದೇಶ ಎಂದು ಮಾತ್ರವೇ (ಸರ್ಕಾರ) ಪರಿಗಣಿಸಲಿ. ಕಾಯಿದೆಯ ವಿರುದ್ಧ ತಡೆಯಾಜ್ಞೆ ತೆರವಾಗಿದೆ ಎಂದು ಭಾವಿಸಿ ಅವರು (ಸರ್ಕಾರ) ಬಲವಂತದ ಕ್ರಮಗಳಿಗೆ ಮುಂದಾಗಬಾರದು” ಎಂದರು.

ಆಗ ಅಸೋಸಿಯೇಷನ್‌ಗಳಿಗೆ ಮಧ್ಯಂತರ ರಕ್ಷಣೆ ನೀಡುವುದಾಗಿ ಸ್ಪಷ್ಟಪಡಿಸಿದ ಸುಪ್ರೀಂ ಪೀಠ ಹೈಕೋರ್ಟ್‌ ನಾಲ್ಕು ವಾರಗಳ ಒಳಗೆ ಪ್ರಕರಣವನ್ನು ನಿರ್ಧರಿಸಲಿ ಎಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

(ಕೃಪೆ: ಬಾರ್ & ಬೆಂಚ್)

Join Whatsapp