ನವದೆಹಲಿ: ದೆಹಲಿ ಸಮೀಪದ ಗೋಕಲ್ಪುರಿಯಲ್ಲಿ ಶುಕ್ರವಾರ ತಡರಾತ್ರಿ ನಡೆದ ಭೀಕರ ಅಗ್ನಿ ದುರಂತಕ್ಕೆ ಕನಿಷ್ಠ 7 ಮಂದಿ ಬಲಿಯಾಗಿದ್ದಾರೆ. ಈ ದುರಂತದಲ್ಲಿ ಸುಮಾರು ಗುಡಿಸಲು ಸುಟ್ಟು ಭಸ್ಮವಾಗಿದೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ತಡರಾತ್ರಿ 1 ಗಂಟೆಗೆ ಈ ದುರ್ಘಟನೆ ನಡೆದಿದ್ದು, ದುರ್ಘಟನಾ ಸ್ಥಳಕ್ಕೆ ಧಾವಿಸಿದ ದೆಹಲಿಯ ಅಗ್ನಿ ಶಾಮಕದಳ ಬೆಂಕಿಯನ್ನು ನಂದಿಸಲಾಗಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಈಶಾನ್ಯ) ದೇವೇಶ್ ಕುಮಾರ್ ಮಹ್ಲಾ ತಿಳಿಸಿದ್ದಾರೆ.
ಸದ್ಯ 13 ಅಗ್ನಿ ಶಾಮಕದಳ ವಾಹನಗಳು ಕಾರ್ಯಾಚರಿಸಿದ್ದು, ಏಳು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಭೀಕರ ದುರಂತದಲ್ಲಿ ಸುಮಾರು 60 ಗುಡಿಸಲು ಸುಟ್ಟು ಭಸ್ಮವಾಗಿದೆ ಎಂದು ಹೇಳಲಾಗಿದೆ.
ಘಟನೆಗೆ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬೆಳಿಗ್ಗೆ ಈ ದುಃಖಕರ ಸುದ್ದಿಯನ್ನು ಕೇಳಿದ್ದೇನೆ. ಅತೀ ಶೀಘ್ರದಲ್ಲಿ ದುರಂತ ಸ್ಥಳಕ್ಕೆ ಖುದ್ದಾಗಿ ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಮಾತ್ರವಲ್ಲ ಘಟನೆಯ ಬಗ್ಗೆ ತೀವ್ರ ಸಂತಾಪ ಸೂಚಿಸಿದ್ದಾರೆ.