ಚಂಡೀಗಢ: ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸಂದರ್ಭದಲ್ಲಿ7 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹರಿಯಾಣದ ಎರಡು ಪ್ರತ್ಯೇಕ ಕಡೆಗಳಲ್ಲಿ ನಡೆದಿದೆ.
ಸೋನಿಪತ್ ನಲ್ಲಿ ಮೂವರು ಹಾಗೂ ಮಹೇಂದ್ರಗಢದಲ್ಲಿ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಸೋನಿಪತ್ನ ಮಿಮಾರ್ಪುರ್ ಘಾಟ್ನಲ್ಲಿ ವ್ಯಕ್ತಿಯೊಬ್ಬ ತನ್ನ ಪುತ್ರ ಮತ್ತು ಸೋದರಸಂಬಂಧಿಯೊಂದಿಗೆ ಗಣೇಶ ಮೂರ್ತಿಯನ್ನು ಹಿಡಿದು ನೀರಿನಲ್ಲಿ ಇಳಿದಾಗ ಮೂವರು ಸಹ ನೀರುಪಾಲಾಗಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹೇಂದರ್ಗಢದಲ್ಲಿ 7 ಅಡಿಯ ಗಣೇಶ ವಿಸರ್ಜನೆ ಮಾಡುವಾಗ 9 ಯುವಕರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ವೇಳೆ ರಾಷ್ಟ್ರೀಯ ವಿಪತ್ತು ನಿಗ್ರಹ ದಳದ ನೆರವಿನೊಂದಿಗೆ ಜಿಲ್ಲಾಡಳಿತ ಕಾರ್ಯಾಚರಣೆ ಕೈಗೊಂಡು, 5 ಮಂದಿ ಯುವಕರನ್ನು ರಕ್ಷಿಸಿದೆ. ಉಳಿದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ