ಇಂದು ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ ಎಂಟು ರಾಜ್ಯಗಳಲ್ಲಿ 6ನೇ ಹಂತದ ಮತದಾನ

Prasthutha|

ನವದೆಹಲಿ: ಇಂದು ದೇಶದ ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ ಎಂಟು ರಾಜ್ಯಗಳಲ್ಲಿ 6ನೇ ಹಂತದ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ.

- Advertisement -

ಒಟ್ಟು 889 ಅಭ್ಯರ್ಥಿಗಳ ಹಣೆಬರಹವನ್ನು ಇಂದು ಮತದಾರರು ಬರೆಯಲಿದ್ದಾರೆ. ಆಯಾ ರಾಜ್ಯಗಳ ಚುನಾವಣಾ ಅಧಿಕಾರಿಗಳು ಅಗತ್ಯ ಸಿದ್ಧತೆಯೊಂದಿಗೆ ಈಗಾಗಲೇ ಮತಗಟ್ಟೆಗಳಲ್ಲಿ ನಿಯೋಜನೆಗೊಂಡಿದ್ದಾರೆ. 11.13 ಕೋಟಿ ಮತದಾರರಲ್ಲಿ 5.84 ಕೋಟಿ ಪುರುಷರು, 5.29 ಮಹಿಳೆಯರು, 5,120 ತೃತೀಯ ಲಿಂಗಿಗಳು ಮತದಾರರ ಪಟ್ಟಿಯಲ್ಲಿ ಇದ್ದಾರೆ.

ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ರಾವ್ ಇಂದರ್‌ಜಿತ್ ಸಿಂಗ್ ಮತ್ತು ಕ್ರಿಶನ್ ಪಾಲ್ ಗುರ್ಜರ್, ಬಿಜೆಪಿಯ ಮೇನಕಾ ಗಾಂಧಿ, ಸಂಬಿತ್ ಪಾತ್ರ, ಅಭಿಜಿತ್ ಗಂಗೋಪಾಧ್ಯಾಯ, ಮನೋಹರ್ ಲಾಲ್ ಖಟ್ಟರ್ ಮತ್ತು ಮನೋಜ್ ತಿವಾರಿ, ಪಿಡಿಪಿ ಮುಖ್ಯಸ್ಥ ಮೆಹಬೂಬಾ ಮುಫ್ತಿ ಮತ್ತು ಕಾಂಗ್ರೆಸ್ ನಾಯಕರಾದ ದೀಪೇಂದರ್ ಸಿಂಗ್ ಹೂಡಾ, ಕನ್ಹಯ್ಯಾ ಕುಮಾರ್​ ಮತ್ತು ರಾಜಹಯ್ಯಾ ಬಬ್ಬ್ ಹೂಡಾ ಸೇರಿದಂತೆ ಹಲವಾರು ಪ್ರಮುಖ ಅಭ್ಯರ್ಥಿಗಳು ಇಂದಿನ ಸ್ಪರ್ಧೆಯಲ್ಲಿದ್ದಾರೆ.

- Advertisement -

ಪ್ರತಿಕೂಲ ಹವಾಮಾನದಿಂದಾಗಿ ಚುನಾವಣೆ ಸಂಬಂಧಿಸಿದ ವಸ್ತುಗಳನ್ನು ಸಾಗಿಸಲು ಸಮಸ್ಯೆ ಎದುರಾದ ಕಾರಣ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌-ರಜೌರಿಯಲ್ಲಿ 3ನೇ ಹಂತದಲ್ಲಿ ಮುಂದೂಡಿಕೆಯಾಗಿದ್ದ ಚುನಾವಣೆ ಇಂದು ನಡೆಯುತ್ತಿದೆ.

ದೆಹಲಿಯ ಎಲ್ಲಾ ಏಳು ಸ್ಥಾನಗಳಿಗೆ ಮತದಾನ ನಡೆಯಲಿದೆ. ಉತ್ತರ ಪ್ರದೇಶ (14), ಹರಿಯಾಣ (10), ಬಿಹಾರ (8), ಪಶ್ಚಿಮ ಬಂಗಾಳ (8), ಒಡಿಶಾ (6) ಮತ್ತು ಜಾರ್ಖಂಡ್ (4) ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್-ರಾಜೌರಿ ಸ್ಥಾನಕ್ಕೂ ಚುನಾವಣೆ ನಡೆಯುತ್ತಿದೆ. ಒಡಿಶಾದ 42 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ರೀಮಲ್‌ ಚಂಡಮಾರುತದಿಂದ ವಾತಾವರಣದಲ್ಲಿ ಬದಲಾವಣೆ ಉಂಟಾಗುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಮತದಾನ ನಡೆಯಲಿರುವ ಪ್ರದೇಶಗಳಲ್ಲಿ ವೈಪರೀತ್ಯದ ಅಪಾಯಗಳಿಲ್ಲ ಎಂದು ತಿಳಿಸಿದೆ.

ಉಳಿದ 57 ಸ್ಥಾನಗಳಿಗೆ ಜೂನ್ 1 ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಮೊದಲ ಐದು ಹಂತದ ಚುನಾವಣೆಗಳಲ್ಲಿ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು 428 ಸ್ಥಾನಗಳಿಗೆ ಮತದಾನ ಪೂರ್ಣಗೊಂಡಿದೆ. ಜೂನ್ 04ರಂದು ಸಾರ್ವತ್ರಿಕ ಚುನಾವಣೆಯ ಎಲ್ಲ ಹಂತಗಳ ಫಲಿತಾಂಶ ಪ್ರಕಟಗೊಳ್ಳಲಿದೆ.
.

Join Whatsapp