ಇಂದಿನಿಂದ 69 ನೇ ಅಖಿಲ ಭಾರತ ಸಹಕಾರಿ ಸಪ್ತಾಹ: ಕನಸಾಗಿಯೇ ಉಳಿದ “ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್”

Prasthutha|

ಬೆಂಗಳೂರು: ರಾಜ್ಯದಲ್ಲಿ 69 ನೇ ಅಖಿಲ ಭಾರತ ಸಹಕಾರಿ ಸಪ್ತಾಹಕ್ಕೆ ರಾಜ್ಯ ಸನ್ನದ್ಧವಾಗಿದ್ದು, ಸೋಮವಾರದಿಂದ ಭಾನುವಾರದವರೆಗೆ ಸಪ್ತಾಹದಡಿ ವಿವಿಧ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. “ಭಾರತ 75-ಸಹಕಾರ ಸಂಸ್ಥೆಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ’ ಎಂಬುದು ಈ ಬಾರಿಯ ಘೋಷವಾಕ್ಯವಾಗಿದೆ. ಆದರೆ ಇಂತಹ ಸುಸಂದರ್ಭದಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ಲಕ್ಷಾಂತರ ಕುಟುಂಬದ ಹಿತ ರಕ್ಷಣೆಗಾಗಿ ಸ್ಥಾಪಿಸಲು ಉದ್ದೇಶಿಸಿದ್ದ “ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್” ನನೆಗುದಿಗೆ ಬಿದ್ದಿರುವುದು ಪಶು ಸಂಗೋಪನಾ ವಲಯದಲ್ಲಿ ಕಾರ್ಮೋಡ ಕವಿದಂತಾಗಿದೆ.

- Advertisement -

ಗೋ ಸಂರಕ್ಷಣೆ, ವರ್ಧನೆ ಮತ್ತು ಸಹಕಾರ ವಲಯದಲ್ಲಿರುವ ಹಾಲು ಉತ್ಪಾದಕರಿಗೆ ನೆರವಾಗುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಾರಿಯ ಬಜೆಟ್ ನಲ್ಲಿ ಪ್ರಕಟಿಸಿದ್ದ “ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್” ಇನ್ನೂ ಘೋಷಣೆಯಾಗಿಯೇ ಉಳಿದಿದೆ.

 ಈ ವರೆಗೆ ಬ್ಯಾಂಕ್ ಸ್ಥಾಪನೆ ವಿಚಾರದಲ್ಲಿ ಪ್ರಗತಿಯಾಗಿಲ್ಲ. ಸರ್ಕಾರದ ಸದುದ್ದೇಶಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಅಡ್ಡಿಯಾಗಿದೆ. ಬ್ಯಾಂಕ್ ಸ್ಥಾಪನೆಗೆ ಇನ್ನೂ ಅನುಮತಿ ನೀಡಿಲ್ಲ. ಬ್ಯಾಂಕ್ ಅಸ್ತಿತ್ವಕ್ಕೆ ಬಂದಲ್ಲಿ ಹಾಲು ಒಕ್ಕೂಟಕ್ಕೆ ಬರುತ್ತಿರುವ ಆರ್ಥಿಕ ಸಂಪನ್ಮೂಲ,  ಸಾಲ, ಸೌಲಭ್ಯ ಪಡೆಯಲು ಹಾಲು ಉತ್ಪಾದಕರಿಗೆ ಅನುಕೂಲವಾಗಲಿದೆ.

- Advertisement -

ಆದರೆ ಇದೀಗ ಹಾಲು ಒಕ್ಕೂಟಗಳ ಹಣ ಡಿಸಿಸಿ ಬ್ಯಾಂಕ್ ಗಳಲ್ಲಿದ್ದು, ಇಲ್ಲಿಗೆ ಬರುವ ಸಂಪನ್ಮೂಲ ತಪ್ಪಿ ಹೋಗುತ್ತದೆ. ಜೊತೆಗೆ ಇಲ್ಲಿನ ಠೇವಣಿ ಮೊತ್ತ ಕೂಡ ಹೊಸದಾಗಿ ಸ್ಥಾಪನೆಯಾಗಲಿರುವ ಬ್ಯಾಂಕ್ ಗೆ ವರ್ಗಾವಣೆಯಾಗುವ ಆತಂಕ ಇದೆ. ಹೀಗಾದರೆ ಜಿಲ್ಲಾ ಬ್ಯಾಂಕ್ ಗಳು ಸಂಕಷ್ಟಕ್ಕೆ ಸಿಲುಕಲಿವೆ ಎನ್ನುವ ಕಾರಣಕ್ಕೆ ಆರ್.ಬಿ.ಐ “ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್” ಸ್ಥಾಪನೆಗೆ ಅನುಮತಿ ನೀಡಿಲ್ಲ ಎಂದು ಸಹಕಾರಿ ಇಲಾಖೆಯ ಮೂಲಗಳು ತಿಳಿಸಿವೆ.

ಸಾರ್ವಜನಿಕ ಹಣಕಾಸು ಭದ್ರತೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಲಕ್ಷ ರೂಪಾಯಿ ಇದ್ದ ಸಹಕಾರ ಬ್ಯಾಂಕ್’ಗಳ ಭದ್ರತಾ ಠೇವಣಿಯನ್ನು ಐದು ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಿದೆ. ಆರ್.ಬಿ.ಐ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದು ಸರ್ಕಾರದ ಕನಸನ್ನು ನನಸು ಮಾಡಲು ಅಡ್ಡಿಯಾಗಿ ಪರಿಣಮಿಸಿದೆ.

ಮೊದಲ ಬಾರಿಗೆ ಸ್ಥಾಪನೆಯಾಗಲಿರುವ ‘ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್’ಗೆ ಕೆಎಂಎಫ್ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳು 260 ಕೋಟಿ ರೂ. ಹಾಗೂ ರಾಜ್ಯ ಸರಕಾರ 100 ಕೋಟಿ ರೂ. ಷೇರು ಬಂಡವಾಳ ಒದಗಿಸಲಿದೆ. ಗೋ ಉತ್ಪನ್ನಗಳ ತಾಂತ್ರಿಕತೆ ಮತ್ತು ಪ್ರಮಾಣೀಕರಣದ ಅಭಿವೃದ್ಧಿಗೆ ಪಶು ವಿವಿಯಲ್ಲಿ ಸಂಶೋಧನಾ ಕೋಶ ಸ್ಥಾಪನೆ ಮಾಡಲಾಗುವುದು ಎಂದು ಘೋಷಿಸಿದ್ದರು. ಮತ್ತೊಂದು ಬಜೆಟ್ ಮಂಡನೆಗೆ ಸರ್ಕಾರ ಸಿದ್ಧವಾಗುತ್ತಿದ್ದು, ಇನ್ನೂ ಹಳೆಯ ಘೋಷಣೆಗಳು ಜಾರಿಯಾಗಿಲ್ಲ. ಕರ್ನಾಟಕ ದೇಶದ 2ನೇ ಸಹಕಾರಿ ಹೈನು ವಲಯವಾಗಿ ಗುರುತಿಸಿಕೊಂಡಿದೆ. ಇದೀಗ ಆರ್.ಬಿ.ಐ ಅನುಮೋದನೆಗಾಗಿ ಸರ್ಕಾರ ಹರಸಾಹಸ ಮಾಡಬೇಕಾದ ಪ್ರಸಂಗ ಎದುರಾಗಿದೆ.

ಭಾರತದ ಸಹಕಾರ ಚಳವಳಿ ವಿಶೇಷವಾಗಿ ತನ್ನದೆಯಾದ ಮಹತ್ವವನ್ನು ಹೊಂದಿದೆ. ಇತ್ತೀಚಿನ ವರದಿಗಳ ಪ್ರಕಾರ ದೇಶದಲ್ಲಿ 8.5 ಲಕ್ಷಕ್ಕೂ ಹೆಚ್ಚು ವಿವಿಧ ರೀತಿಯ ಸಹಕಾರಿ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, 31 ಕೋಟಿ ಸದಸ್ಯ ಬಳಗವನ್ನು ಹೊಂದಿದೆ. ಕರ್ನಾಟಕ ಸಹಕಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು, ಪ್ರಸ್ತುತ 45 ಸಾವಿರ ಸಹಕಾರ ಸಂಘ ಸಂಸ್ಥೆಗಳು ಹಾಗೂ 2.30 ಕೋಟಿ ಸದಸ್ಯರನ್ನು ಹೊಂದಿದೆ.

ಕೃಷಿ, ಹಾಲು ಉತ್ಪಾದನೆ, ಪತ್ತಿನ ವಲಯ ಹಾಗೂ ಪಟ್ಟಣ ಸಹಕಾರ ಬ್ಯಾಂಕಿಂಗ್ ವಲಯಗಳಲ್ಲಿ ಉತ್ತಮ ಪ್ರಗತಿಯಾಗಿದೆ. ಇನ್ನು ರಾಜ್ಯದ ಸಹಕಾರ ಚಳವಳಿಯ ಮಾತೃ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಸಹಕಾರ ಚಳವಳಿಯ ಪರಿಣಾಮಕಾರಿ ಬೆಳವಣಿಗೆಗೆ ಅಗತ್ಯವಾದ ಸಹಕಾರ ಶಿಕ್ಷಣ, ತರಬೇತಿ ಹಾಗೂ ಪ್ರಚಾರವನ್ನು ಕಳೆದ ೯೮ ವರ್ಷಗಳಿಂದಲೂ ನಿರಂತರವಾಗಿ ನಡೆಸುತ್ತಿದೆ.   ಸಹಕಾರ ಶಿಕ್ಷಣ, ತರಬೇತಿ ಪ್ರಚಾರದ ಹೊಣೆಯನ್ನು ಹೊತ್ತಿರುವ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಪ್ರತಿವರ್ಷ ರಾಜ್ಯದ 40 ಸಾವಿರ ಜನರಿಗೆ ಸಹಕಾರ ಶಿಕ್ಷಣ, 5೦೦೦ ಜನರಿಗೆ ಸಹಕಾರ ತರಬೇತಿ ನೀಡುತ್ತಿದೆ. ಮಹಾಮಂಡಳ ಸಹಕಾರ ಚಳವಳಿಯ ಧನಿಯಾಗಿ, ಸಹಕಾರಿಗಳ ವೇದಿಕೆಯಾಗಿ ಕೆಲಸ ಮಾಡುತ್ತಿದೆ.

ಈ ಬಾರಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಸಪ್ತಾಹವನ್ನು ನವೆಂಬರ್ 14 ರಂದು ಆರಂಭಿಸಲಾಗುತ್ತಿದ್ದು, ಹೀಗಾಗಿ ಈ ದಿನ ಪವಿತ್ರದಿನ. ಅಂದು ಭಾರತದ ಪ್ರಥಮ ಪ್ರಧಾನಿ ಪಂಡಿತ್ ನೆಹರೂ ಹುಟ್ಟಿದ ದಿನ.

ಸಹಕಾರ ಚಳವಳಿಯ ಸಮಗ್ರ ಬೆಳವಣಿಗೆಗೆ ಅವರು ನೀಡಿರುವ ದೊಡ್ಡ ಕೊಡುಗೆಯನ್ನು ಸ್ಮರಿಸಿಕೊಂಡು ಅವರಿಗೆ ಕೃತಜ್ಞತೆ ಅರ್ಪಿಸಲು ಅವರ ಹುಟ್ಟುಹಬ್ಬದಂದು ಸಪ್ತಾಹದ ಆಚರಣೆ ಆರಂಭಿಸಲಾಗುತ್ತದೆ. ಏಳು ದಿನಗಳು ನಡೆಯುವ ಸಪ್ತಾಹದ ಸಂದರ್ಭದಲ್ಲಿ ಸಹಕಾರ ವಲಯಕ್ಕೆ ಸಂಬಂಧಿಸಿದ ಏಳು ವಿಷಯಗಳನ್ನು ಆಯ್ಕೆ ಮಾಡಿಕೊಂಡು ಚಿಂತನ-ಮಂಥನ ನಡೆಯುತ್ತದೆ. ಇದೇ ಸಂದರ್ಭದಲ್ಲಿ ಸಹಕಾರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಸಹಕಾರಿಗಳನ್ನು ಗುರುತಿಸಿ 2022ನೇ ಸಾಲಿನ ಸಹಕಾರ ರತ್ನ ಪ್ರಶಸಿ  ನೀಡಿ ಗೌರವಿಸಲಾಗುತ್ತಿದೆ. ಸಹಕಾರ ಸಪ್ತಾಹದ ಈ ಸಮಯದಲ್ಲಿ  ಸಹಕಾರ ಚಳವಳಿಯ ಕಳೆದ ವರ್ಷ ಗಳಿಸಿದ ಸಾಧನೆಯನ್ನು, ಎದುರಿಸದ ಸಮಸ್ಯೆಗಳ ಕುರಿತು ಚಿಂತನ – ಮಂಥನ ನಡೆಸಿ ಮುಂಬರುವ ದಿನಗಳಿಗೆ ಹೊಸ ಗುರಿಯನ್ನು ಹಾಕಿಕೊಳ್ಳಲಾಗುತ್ತಿದೆ. ಹೀಗಾಗಿ ಬರುವ ವರ್ಷವಾದರೂ “ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್” ನ ಕನಸು ನನಸಾಗಲಿ ಎಂಬುದು ಹೈನುಗಾರಿಕೆ ವಲಯದಲ್ಲಿರುವವರ ಆಶಯವಾಗಿದೆ.

Join Whatsapp