ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್’ಗೆ ಸೇರಿದ 39 ಲಕ್ಷ ಮೌಲ್ಯದ 66 ಕೆಜಿ ಬೆಳ್ಳಿ ವಶ

Prasthutha|

ದಾವಣಗೆರೆ: ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್’ಗೆ ಸೇರಿದ್ದೆಂದು ಹೇಳಲಾದ 39 ಲಕ್ಷ ಮೌಲ್ಯದ 66 ಕೆ.ಜಿ. ಬೆಳ್ಳಿ ಸಾಮಗ್ರಿಯನ್ನು ನಗರದ ಹೊರವಲಯದ ಹೆಬ್ಬಾಳು ಟೋಲ್’ನ ಚೆಕ್ ಪೋಸ್ಟ್’ನಲ್ಲಿ ತಡರಾತ್ರಿ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

- Advertisement -


ಚೆನ್ನೈಯಿಂದ ಮುಂಬೈನತ್ತ ಬಿಎಂಡಬ್ಲ್ಯೂ ಕಾರ್’ನಲ್ಲಿ ಐದು ಬಾಕ್ಸ್’ಗಳಲ್ಲಿ ಬೆಳ್ಳಿ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದರು. ರಘುನಾಥ ನೇತೃತ್ವದ ವಿಚಕ್ಷಣಾ ದಳವು ಬೆಳ್ಳಿ ಬಟ್ಟಲು, ಚಮಚ, ನೀರಿನ ಜಗ್ ಹಾಗೂ ತಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್’ನಲ್ಲಿದ್ದ ಹರಿಸಿಂಗ್, ಚಾಲಕ ಸುಲ್ತಾನ್ ಖಾನ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳ್ಳಿ ಸಾಮಗ್ರಿಗಳು ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರ ಕುಟುಂಬಕ್ಕೆ ಸೇರಿವೆ ಎಂದು ಹರಿಸಿಂಗ್ ಹೇಳಿಕೆ ನೀಡಿದ್ದಾರೆ. ಬೆಳ್ಳಿ ಸಾಮಗ್ರಿಗಳಿಗೆ ಪೂರಕ ದಾಖಲೆ ತೋರಿಸದಿದ್ದರಿಂದ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದು, ನಿರ್ಮಾಪಕ ಬೋನಿ ಕಪೂರ್ಗೆ ಸೇರಿದ್ದ ಇಲ್ಲ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ.


8 ಕೋಟಿ ನಗದು ಜಪ್ತಿ:
ಚುನಾವಣಾ ಅಕ್ರಮದ ಮೇಲೆ ನಿಗಾ ವಹಿಸಿರುವ ಚುನಾವಣಾ ಆಯೋಗವು 8.04 ಕೋಟಿ ರು.ಗಿಂತ ಅಧಿಕ ನಗದನ್ನು ಜಪ್ತಿ ಮಾಡಿದೆ. ಈ ಮೂಲಕ ಈವರೆಗೆ 35.42 ಕೋಟಿ ರು. ನಗದನ್ನು ವಶಕ್ಕೆ ಪಡೆದುಕೊಂಡಂತಾಗಿದೆ.
ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ 4.71 ಕೋಟಿ ರು. ನಗದು, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ 2.66 ಕೋಟಿ ರು. ಮೌಲ್ಯದ 5.58 ಕೆಜಿ ಚಿನ್ನ, ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದಲ್ಲಿ 1.05 ಕೋಟಿ ರು. ಮೌಲ್ಯದ 141.959 ಕೆಜಿ ಬೆಳ್ಳಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -


51,628 ಶಸ್ತ್ರಾಸ್ತ್ರ ಜಮೆ:
ನೀತಿ ಸಂಹಿತೆ ಜಾರಿಯಾದ ಬಳಿಕ ಇಲ್ಲಿಯವರೆಗೆ ಆಯೋಗವು 35.42 ಕೋಟಿ ರು. ನಗದು, 27.04 ಕೋಟಿ ಮೌಲ್ಯದ 4.45 ಲಕ್ಷ ಲೀಟರ್ ಮದ್ಯ,1.19 ಕೋಟಿ ರು. ಮೌಲ್ಯದ 146.20 ಕೆಜಿ ಮಾದಕವಸ್ತುಗಳು ಸೇರಿದಂತೆ 93.40 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ. ಒಟ್ಟು 697 ಎಫ್’ಐಆರ್ ದಾಖಲಿಸಿ 51,628 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಂಡು 10 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 11 ಶಸ್ತ್ರಾಸ್ತ್ರಗಳ ಪರವಾನಗಿ ರದ್ದುಪಡಿಸಲಾಗಿದೆ. ಸಿಆರ್’ಪಿಸಿ ಕಾಯ್ದೆಯಡಿ 2,238 ಪ್ರಕರಣಗಳನ್ನು ದಾಖಲಿಸಲಾಗಿದೆ.
ಈ ಪೈಕಿ 3,439 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 6137 ಜಾಮೀನು ರಹಿತ ವಾರೆಂಟ್’ಗಳನ್ನು ಜಾರಿಗೊಳಿಸಲಾಗಿದೆ.

Join Whatsapp