ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವು: ಭಾರತೀಯ ಔಷಧಿಗಳ ತನಿಖೆಗೆ ಮುಂದಾದ ವಿಶ್ವ ಆರೋಗ್ಯ ಸಂಸ್ಥೆ

Prasthutha|

ನ್ಯೂಯಾರ್ಕ್ :  ಭಾರತ ನಿರ್ಮಿತ ಕಫ್ ಸಿರಪ್ ಸೇವಿಸಿ ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾದಲ್ಲಿ 60 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರಬಹುದು ಎಂದು ಅಂದಾಜಿಸಿರುವ ವಿಶ್ವ ಆರೋಗ್ಯ ಸಂಸ್ಥೆ  ಅವುಗಳ ತನಿಖೆಗೆ ಮುಂದಾಗಿದೆ.

- Advertisement -

ಮೂತ್ರಪಿಂಡಕ್ಕೆ ತೀವ್ರವಾದ ಹಾನಿ ಮಾಡುವ ಮೂಲಕ ಗ್ಯಾಂಬಿಯಾದ 66 ಮಕ್ಕಳ ಸಾವಿಗೆ ಕಾರಣವಾದ ನಾಲ್ಕು ಕೆಮ್ಮು ಮತ್ತು ಶೀತ  ಔಷಧಿಗಳಿಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ ಒ) ಉತ್ಪನ್ನ ಎಚ್ಚರಿಕೆಯನ್ನು ನೀಡಿದೆ.

ಭಾರತದ ಹರಿಯಾಣದಲ್ಲಿರುವ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್  ಈ ಉತ್ಪನ್ನವನ್ನು ತಯಾರಿಸಿದ್ದು, ಇದು ವಿಷಕಾರಿ ಮತ್ತು ಮಾರಣಾಂತಿಕ ಅಂಶವನ್ನು ಒಳಗೊಂಡಿದೆ ಎಂದು ಡಬ್ಲ್ಯುಎಚ್ ಒ ಹೇಳಿದೆ.

- Advertisement -

ಈ ಕುರಿತು ಜಿನೀವಾದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಡಬ್ಲ್ಯುಎಚ್ಒ ಮಹಾನಿರ್ದೇಶಕ ಟೆಡ್ರೋಸ್ ಅಧಾನೋಮ್ ಘೆಬ್ರೆಯೆಸಸ್ ಮಾತನಾಡಿ, ವಿಷಕಾರಿ ಅಂಶಗಳಿಂದಾಗಿಯೇ ಮಕ್ಕಳಲ್ಲಿ ಮೂತ್ರಪಿಂಡದ ಸೋಂಕುಗಳು ಕಾಣಿಸಿಕೊಂಡು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಭಾರತದಲ್ಲಿನ ಕಂಪನಿ ಮತ್ತು ನಿಯಂತ್ರಕ ಅಧಿಕಾರಿಗಳೊಂದಿಗೆ ಹೆಚ್ಚಿನ ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದರು.

ಕಲುಷಿತ ಕೆಮ್ಮಿನ ಔಷಧಿಗಳು ಸದ್ಯ ಗ್ಯಾಂಬಿಯಾದಲ್ಲಿ ಮಾತ್ರ ಪತ್ತೆಯಾಗಿವೆ. ಆದರೆ, ಇತರೆ ದೇಶಗಳಿಗೂ ಅದೇ ಕಂಪನಿಯ ಉತ್ಪನ್ನಗಳು ವಿತರಿಸಲ್ಪಟ್ಟಿರುವುದರಿಂದ ಎಚ್ಚರವಾಗಿರುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವೈದ್ಯಕೀಯ ಉತ್ಪನ್ನ ಎಚ್ಚರಿಕೆಯ ಪ್ರಕಾರ, ನಾಲ್ಕೂ ಉತ್ಪನ್ನಗಳ ಮಾದರಿಗಳ ಪ್ರಯೋಗಾಲಯ ವಿಶ್ಲೇಷಣೆಯಲ್ಲಿ ಅವುಗಳು ಅಧಿಕ ಪ್ರಮಾಣದ ಡೈಥಿಲೀನ್ ಗ್ಲೈಕೋಲ್ ಮತ್ತು ಎಥಿಲೀನ್ ಗ್ಲೈಕೋಲ್ ಅನ್ನು ಒಳಗೊಂಡಿವೆ ಎಂಬುದು ಖಚಿತಪಟ್ಟಿದೆ. ಈ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ತಯಾರಕರು ವಿಶ್ವ ಆರೋಗ್ಯ ಸಂಸ್ಥೆಗೆ ಖಾತರಿ ನೀಡಿಲ್ಲ.




Join Whatsapp