ನವದೆಹಲಿ: ಭಾರತ ನಿರ್ಮಿತ ಕಫ್ ಸಿರಪ್ ಸೇವಿಸಿ ಗ್ಯಾಂಬಿಯಾದಲ್ಲಿ 60ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಎಚ್ಚರಿಸಿದ ಬೆನ್ನಲ್ಲೇ ಹರಿಯಾಣ ರಾಜ್ಯ ಔಷಧ ನಿಯಂತ್ರಕ ಮತ್ತು ಪರವಾನಗಿ ಪ್ರಾಧಿಕಾರವು ಸೋನೆಪತ್ ನಲ್ಲಿರುವ ಸಂಸ್ಥೆಯ ಉತ್ಪಾದನಾ ಘಟಕದಲ್ಲಿ ತಪಾಸಣೆ ನಡೆಸಿ ಮೇಡನ್ ಫಾರ್ಮಾಗೆ ಶೋಕಾಸ್ ನೋಟಿಸ್ ನೀಡಿದೆ.
ಹರಿಯಾಣದ ಆಹಾರ ಮತ್ತು ಔಷಧಗಳ ಆಡಳಿತ ಇಲಾಖೆಯ ರಾಜ್ಯ ಔಷಧ ನಿಯಂತ್ರಕ-ಕಮ್-ಲೈಸೆನ್ಸಿಂಗ್ ಪ್ರಾಧಿಕಾರವು ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ, 1940 ಮತ್ತು ನಿಯಮಗಳು, 1945 ರ ನಿಯಮ 85 (2) ಮತ್ತು ನಿಯಮಗಳು, 1945 ರ ಅಡಿಯಲ್ಲಿ ಮೇಡನ್ ಫಾರ್ಮಾಗೆ ನೋಟಿಸ್ ನೀಡಿದೆ.
ವಾರದ ಅಂತ್ಯದ ವೇಳೆಗೆ ಕಂಪನಿಯ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿದೆ.
ಸೋನೆಪತ್ ನಲ್ಲಿರುವ ಮೇಡನ್ ಫಾರ್ಮಾಸ್ಯುಟಿಕಲ್ ನ ಪರಿಶೀಲಿಸಿದಾಗ ಅನೇಕ ವ್ಯತ್ಯಾಸಗಳ ಕಂಡುಬಂದಿದ್ದು, ಇದು ಉತ್ಪಾದನಾ ಘಟಕವನ್ನು ಔಷಧಗಳ ಉತ್ಪಾದನೆಗೆ ನಿಗದಿಪಡಿಸಲಾದ ಮಾನದಂಡಗಳ ಗಂಭೀರ ಉಲ್ಲಂಘನೆಯಾಗಿದೆ ಹರಿಯಾಣ ರಾಜ್ಯ ಔಷಧ ನಿಯಂತ್ರಕ ತನ್ನ ಏಳು ಪುಟಗಳ ಶೋಕಾಸ್ ನೋಟಿಸ್ ನಲ್ಲಿ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಸೆಪ್ಟೆಂಬರ್ 29 ರಂದು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ನಾಲ್ಕು ಕೆಮ್ಮಿನ ಸಿರಪ್ ಗಳಾದ ಪ್ರೊಮೆಥಾಝೈನ್ ಓರಲ್ ಸೊಲ್ಯೂಷನ್, ಕೊಫೆಕ್ಸ್ಮಾಲಿನ್ ಬೇಬಿ ಕಾಫ್ ಸಿರಪ್, ಮಕಾಫ್ ಬೇಬಿ ಕಾಫ್ ಸಿರಪ್ ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್ ಬಗ್ಗೆ ತನಿಖೆಗೆ ಆದೇಶಿಸಿದ್ದು, ಔಷಧಗಳು ಡೈಥೈಲೀನ್ ಗ್ಲೈಕಾಲ್ ಅಥವಾ ಎಥಿಲೀನ್ ಗ್ಲೈಕಾಲ್ ನಿಂದ ಕಲುಷಿತಗೊಂಡಿರಬಹುದು ಎಂದು ಡಬ್ಲ್ಯುಎಚ್ಒ ಎಚ್ಚರಿಕೆ ನೀಡಿತ್ತು.