ಮಧ್ಯಪ್ರದೇಶ: ವಿಜಯಪುರದಲ್ಲಿ ಇತ್ತೀಚೆಗೆ 2 ವರ್ಷದ ಬಾಲಕ ಬೋರ್ ಬೋಲ್ ಗೆ ಬಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಶುಕ್ರವಾರ ಆರು ವರ್ಷದ ಬಾಲಕ ಬೋರ್ ವೆಲ್ ಗೆ ಬಿದ್ದಿರುವ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಗಡಿ ಸಮೀಪದ ಮಾಣಿಕಾ ಗ್ರಾಮದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾಲಕ ತೆರೆದ ಬೋರ್ ವೆಲ್ ಬಳಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ.
ರೇವಾ ಜಿಲ್ಲಾಧಿಕಾರಿ ಪ್ರತಿಭಾ ಪಾಲ್ ಅವರು ಹೇಳಿರುವ ಪ್ರಕಾರ, ಮಗು ಸುಮಾರು 40 ಅಡಿ ಆಳದಲ್ಲಿ ಸಿಲುಕಿಕೊಂಡಿದೆ. ಘಟನೆಯ ನಂತರ, ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆಯ ತಂಡವು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಮತ್ತು ವಾರಣಾಸಿಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ಕರೆಸಲಾಗಿದೆ. ಅಧಿಕಾರಿಗಳು ಪೈಪ್ ಮೂಲಕ ಆಮ್ಲಜನಕ ಪೂರೈಕೆ ಮಾಡುತ್ತಿದ್ದಾರೆ. ಹೆಚ್ಚುವರಿಯಾಗಿ, ಬಾಲಕನ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಿಸಿಟಿವಿ ಕ್ಯಾಮೆರಾವನ್ನು ಸಹ ಇಳಿಸಲಾಗಿದೆ. ಆದರೂ, ಕೆಲವು ಅಡಚಣೆಗಳಿಂದ ಕ್ಯಾಮೆರಾ ಬಾಲಕನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸೋಂಕರ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಬೋರ್ವೆಲ್ ಸುಮಾರು 70 ಅಡಿ ಆಳವಿದ್ದು, ಮಗುವನ್ನು ರಕ್ಷಿಸಲು ಸಮಾನಾಂತರ ಹೊಂಡವನ್ನು ತೋಡಲಾಗುತ್ತಿದೆ ಎಂದು ಹೇಳಿದ್ದಾರೆ.