ಶೇ.6ರಷ್ಟು ಮೀಸಲಾತಿ ನಮಗೆ ಸಾಲದು: ಒಕ್ಕಲಿಗರ ಹೋರಾಟ ಸಮಿತಿ

Prasthutha|

ಬೆಂಗಳೂರು: ಒಕ್ಕಲಿಗ ಸಮುದಾಯ ರಾಜ್ಯದ ಅತ್ಯಂತ ದೊಡ್ಡ ಸಮುದಾಯ. ಜನಸಂಖ್ಯೆಗೆ ಅನುಗುಣವಾಗಿ ಈ ಸಮುದಾಯಕ್ಕೆ ಶೇ.12ರಷ್ಟು ಮೀಸಲಾತಿ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿತ್ತು. ಆದರೆ ಸರಕಾರ ಕೇವಲ ಶೇ.2ರಷ್ಟು ಮಾತ್ರ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರುತ್ತದೆ ಎಂಬ ಆಶಾಭಾವನೆ ಹೊಂದಿದ್ದೇವೆ ಎಂದು ರಾಜ್ಯ ಒಕ್ಕಲಿಗರ ಹೋರಾಟ ಸಮಿತಿ ಅಭಿಪ್ರಾಯಪಟ್ಟಿದೆ.


ಒಕ್ಕಲಿಗ ಸಮುದಾಯಕ್ಕೆ ಈಗಾಗಲೇ ಶೇ.4ರಷ್ಟು ಮೀಸಲಾತಿಯಿತ್ತು. ಅದನ್ನು ಜನಸಂಖ್ಯೆಗೆ ಅನುಗುಣವಾಗಿ ಶೇ.12ಕ್ಕೆ ಹೆಚ್ಚಿಸಬೇಕು ಎಂಬುದು ಒಕ್ಕಲಿಗ ಸಮುದಾಯದ ಧಾರ್ಮಿಕ ಗುರುಗಳ ಮುಖಂಡತ್ವದಲ್ಲಿ ರಾಜ್ಯ ಒಕ್ಕಲಿಗರ ಹೋರಾಟ ಸಮಿತಿಯನ್ನು ರಚಿಸಿಕೊಂಡು ಕಳೆದ ಮೂರು ವರ್ಷಗಳಿಂದ ನಿರಂತರ ಹೋರಾಟ ನಡೆಸಿದೆವು. ಆದರೆ ಸರಕಾರ 4 ರಿಂದ 6ಕ್ಕೆ ಏರಿಕೆ ಮಾಡಿದೆ. ಅಂದರೆ ಶೇ.2ರಷ್ಟು ಮಾತ್ರ ಹೆಚ್ಚಳ ಮಾಡಿದೆ. ರಾಜ್ಯದ ಅತಿ ದೊಡ್ಡ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ಏನೇನೂ ಸಾಲದು ಎಂದು ರಾಜ್ಯ ಒಕ್ಕಲಿಗರ ಹೋರಾಟ ಸಮಿತಿ ಅಧ್ಯಕ್ಷ ಡಾ. ಗಾನಂ ಶ್ರೀಕಂಠಯ್ಯ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

- Advertisement -


ಒಕ್ಕಲಿಗ ಸಮುದಾಯ ಪ್ರವರ್ಗ 3ಎನಲ್ಲಿತ್ತು. ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.4ರಷ್ಟು ಮೀಸಲಾತಿ ಪಡೆಯುತ್ತಿತ್ತು. ಕರ್ನಾಟಕ ರಾಜ್ಯ ಒಂದರಲ್ಲೇ ನೆಲಸಿರುವ ಸುಮಾರು ಒಂದು ಕೋಟಿಗೂ ಹೆಚ್ಚು ಜನಸಂಖ್ಯೆವುಳ್ಳ `ಒಕ್ಕಲಿಗ’ ಸಮಾಜದ 115 ಉಪ ಪಂಗಡಗಳಿದ್ದು, ಅತ್ಯಂತ ಶ್ರಮಜೀವಿಗಳು. ಆದರೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದ ಸಮುದಾಯವಾಗಿದೆ. ಹೀಗಾಗಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನು ಶೇ.12ರಷ್ಟು ಹೆಚ್ಚಿಸಬೇಕು ಎಂಬುದು ನಮ್ಮ ಹಕ್ಕೊತ್ತಾಯ. ಇದೀಗ ಶೇ.6ರಷ್ಟು ಮೀಸಲಾತಿ ನೀಡಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇವೆ.ರಾಜ್ಯದ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಯವರು ಮತ್ತು ವೊಕ್ಕಲಿಗ ಮಂತ್ರಿಗಳಿಗೆ ಹೋರಾಟ ಸಮಿತಿ ಕೃತಜ್ಞತೆ ಸಲ್ಲಿಸುತ್ತದೆ.


ಮುಂದಿನ ದಿನಗಳಲ್ಲಿ ಮೀಸಲಾತಿಯ ಪ್ರಮಾಣವನ್ನು ಶೇ.12ಕ್ಕೆ ಏರಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಸಂಚಾಲಕರಾದ ಆಡಿಟರ್ ನಾಗರಾಜ್ ಯಲಚವಾಡಿ, ಸಮಿತಿಯ ಪದಾಧಿಕಾರಿಗಳಾದ ಬಿ. ಮೋಹನ್ ಕುಮಾರ್, ಬಾಬಿ ವೆಂಕಟೇಶ್ ,ಗಂಗಣ್ಣ ಮತ್ತಿತರರು ಪಾಲ್ಗೊಂಡಿದ್ದರು.

- Advertisement -