ಪಾಟ್ನಾ : ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷದ ಅರುಣಾಚಲ ಪ್ರದೇಶದ ಏಳು ಮಂದಿ ಶಾಸಕರಲ್ಲಿ ಆರು ಮಂದಿ ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈಗಾಗಲೇ ಇತ್ತೀಚೆಗೆ ಬಿಹಾರದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗಿಂತಲೂ ಕಡಿಮೆ ಸ್ಥಾನ ಗಳಿಸಿದ್ದ ಜೆಡಿಯುಗೆ ಇದೀಗ ಅರುಣಾಚಲ ಪ್ರದೇಶದಲ್ಲಿ ಮಿತ್ರಪಕ್ಷದಿಂದಲೇ ಭಾರೀ ಆಘಾತದ ಸುದ್ದಿ ಬಂದಿದೆ.
60 ಮಂದಿ ಸದಸ್ಯ ಬಲದ ಅರುಣಾಚಲಪ್ರದೇಶ ವಿಧಾನಸಭೆಯಲ್ಲಿ ಈಗ ಜೆಡಿಯು ಒಬ್ಬರೇ ಶಾಸಕರನ್ನು ಹೊಂದುವಂತಾಗಿದೆ. ಜೆಡಿಯು ತೊರೆದು ಬಿಜೆಪಿ ಸೇರಿದ ಶಾಸಕರಲ್ಲಿ ಹಾಯೆಂಗ್ ಮ್ಯಾಂಗ್ಫಿ, ಜಿಕ್ಕೆ ತಾಕೊ, ಡೊಂಗ್ರು ಸಿಯೊಗ್ಜು, ತಾಲೆಮ್ ತೊಬೊಹ್, ಕಾಂಗೊಂಗ್ ತಾಕು ಮತ್ತು ದೊರ್ಜಿ ವಾಂಗ್ಡಿ ಖರ್ಮಾ ಮುಂತಾದವರು ಸೇರಿದ್ದಾರೆ.
ಅರುಣಾಚಲಪ್ರದೇಶದಲ್ಲಿ ಜೆಡಿಯು ಪ್ರತಿಪಕ್ಷವಾಗಿದ್ದರೂ ಬಿಜೆಪಿ ನೇತೃತ್ವದ ಸರಕಾರಕ್ಕೆ ಬೆಂಬಲ ನೀಡುತ್ತಿದೆ. ಹೀಗಿದ್ದರೂ ಬಿಜೆಪಿ ಬೆನ್ನಿಗಿರಿದಿದೆ ಎಂದು ಸ್ಥಳೀಯ ಜೆಡಿಯು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.