ಕಳೆದ 55 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ವರ್ಷದ ಗಣರಾಜ್ಯೋತ್ಸವ ಸಮಾರಂಭ ವಿದೇಶದ ವಿಶೇಷ ಅತಿಥಿ ಇಲ್ಲದೆ ನಡೆಯಲಿದೆ.
ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪ್ರತಿ ವರ್ಷ ಯಾವುದಾದರೂ ಒಂದು ದೇಶದ ಮುಖ್ಯಸ್ಥರು ಮುಖ್ಯ ಅತಿಥಿಯಾಗಿ ಆಗಮಿಸಿ ನಮ್ಮ ದೇಶದ ಸೈನ್ಯದ ಕಸರತ್ತುಗಳನ್ನು ವೀಕ್ಷಿಸುವುದು, ಆತಿಥ್ಯ ಸ್ವೀಕರಿಸುವುದು ಸಂಪ್ರದಾಯವಾಗಿ ಬೆಳೆದುಬಂದಿದೆ.
ಈ ಬಾರಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವುದಾಗಿ ಹೇಳಲಾಗಿತ್ತು. ಆದರೆ ಬ್ರಿಟನ್ ನಲ್ಲಿ ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಅವರು ತಮ್ಮ ಭಾರತ ಭೇಟಿಯನ್ನು ರದ್ದುಪಡಿಸಿದ್ದರು. ಮಾತ್ರವಲ್ಲ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಅಲ್ಲಿನ ಕೆಲವು ಸಂಸದರು ಅಲ್ಲಿನ ಪ್ರಧಾನಿಗೆ ಪತ್ರ ಬರೆದು ಭಾರತ ಭೇಟಿ ರದ್ದುಪಡಿಸುವಂತೆ ಒತ್ತಾಯಿಸಿದ್ದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ವಿದೇಶಾಂಗ ವ್ಯವಹಾರಗಳ ವಕ್ತಾರ ಅನುರಾಗ್ ಶ್ರೀವಾಸ್ತವ್, ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಯಾವುದೇ ವಿದೇಶಿ ಪ್ರತಿನಿಧಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
1966 ರಲ್ಲಿ, ಜನವರಿ 11 ರಂದು ತಾಷ್ಕೆಂಟ್‌ನಲ್ಲಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನಿಧನ ಹೊಂದಿದ ಕಾರಣ ಆ ವರ್ಷ ಗಣರಾಜ್ಯೋತ್ಸವಕ್ಕೆ ವಿದೇಶಿ ಪ್ರತಿನಿಧಿಗಳಿಗೆ ಯಾವುದೇ ಆಹ್ವಾನ ನೀಡಿರಲಿಲ್ಲ.
ಭಾರತದ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಲು ಆಹ್ವಾನ ನೀಡುವುದು ವಿದೇಶಿ ಗಣ್ಯರಿಗೆ ಸಲ್ಲಿಸುವ ವಿಶೇಷ ಗೌರವವಾಗಿದೆ. ಮುಖ್ಯ ಅತಿಥಿಯನ್ನು ನಿರ್ಧರಿಸುವಾಗ ರಾಜತಾಂತ್ರಿಕ, ವ್ಯವಹಾರ ದೇಶದ ಹಿತಾಸಕ್ತಿಗಳು ಮತ್ತು ಭೌಗೋಳಿಕ ರಾಜಕೀಯ ಮುಂತಾದ ಅಂಶಗಳನ್ನು ಪರಿಗಣಿಸಲಾಗುತ್ತದೆ.
55 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವಕ್ಕೆ ವಿದೇಶಿ ಅತಿಥಿ ಇಲ್ಲ !
Prasthutha|