ಕೋವಿಡ್ ಅವಧಿಯಲ್ಲಿ ವೆಟ್ರಿವೇಲ್ ಯಾತ್ರೆ : ತಮಿಳುನಾಡು ಬಿಜೆಪಿ ಅಧ್ಯಕ್ಷನ ಬಂಧನ

Prasthutha|

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಎಲ್ ಮುರುಗನ್, ಅಣ್ಣಾಮಲೈ ಸೇರಿದಂತೆ ಸುಮಾರು 100 ಕಾರ್ಯಕರ್ತರನ್ನು ಅನುಮತಿಯಿಲ್ಲದೆ ವೆಟ್ರಿವೇಲ್ ಯಾತ್ರೆ ನಡೆಸಿದ್ದಕ್ಕಾಗಿ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಈ ಯಾತ್ರೆಗೆ ಅನುಮತಿ ನೀಡುವುದರಿಂದ ರಾಜ್ಯದಲ್ಲಿ ಕೋಮುಗಲಭೆಗೆ ಕಾರಣವಾಗಬಹುದೆಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಇದರಿಂದಾಗಿ ಬಿಜೆಪಿಯ ಮಿತ್ರಪಕ್ಷವಾದ ಎಐಡಿಎಂಕೆ ನೇತೃತ್ವದ ಸರಕಾರ ವೆಟ್ರಿವೇಲ್ ಯಾತ್ರೆಗೆ ಅನುಮತಿ ನಿರಾಕರಿಸಿತ್ತು. ಯಾತ್ರೆ ನಡೆಸಿದರೆ ತಮಿಳುನಾಡಿನಲ್ಲಿ ಮತ್ತೊಮ್ಮೆ ಕೋವಿಡ್ ಹರಡುವ ಸಾಧ್ಯತೆ ಇರುವುದರಿಂದ ಅನುಮತಿಯನ್ನು ನಿರಾಕರಿಸಲಾಗಿತ್ತು.

- Advertisement -

ನವೆಂಬರ್ 6ರಿಂದ ಡಿಸೆಂಬರ್ 6ರವರೆಗೆ ಕೋವಿಡ್ ನಿಯಮಾನುಸಾರ ಯಾವುದೇ ಯಾತ್ರೆಗೆ ಅನುಮತಿಸಲಾಗುವುದಿಲ್ಲ ಎಂದು ಪೊಲೀಸರು ಮದ್ರಾಸ್ ಹೈಕೋರ್ಟಿಗೆ ತಿಳಿಸಿದ್ದರು. ಆದರೆ ಇದು ಹಕ್ಕುಗಳ ಉಲ್ಲಂಘನೆ ಎಂದು ಬಿಜೆಪಿ ಅಧ್ಯಕ್ಷ ಮುರುಗನ್ ಹೇಳಿದ್ದಾರೆ. ಮಂದಿರಕ್ಕೆ ಹೋಗಿ ಪ್ರಾರ್ಥನೆ ಮಾಡಲು ತಮಗೆ ಸಾಂವಿಧಾನಿಕ ಹಕ್ಕಿದೆ ಎಂದು ಯಾತ್ರೆಗೆ ಹೊರಡುವ ಮೊದಲು ಮುರುಗನ್ ಹೇಳಿದ್ದರು.

ವೆಟ್ರಿವೇಲ್ ಯಾತ್ರೆಗೆ ಮುರುಗಾ ದೇವರು ಈಗಾಗಲೇ ಅನುಮತಿ ನೀಡಿದ್ದಾನೆ. ಆದ್ದರಿಂದಲೇ ನಾವು ಯಾತ್ರೆಯೊಂದಿಗೆ ಮುಂದುವರಿಯುತ್ತಿದ್ದೇವೆ ಎಂದು ಮುರುಗನ್ ಹೇಳಿದ್ದಾರೆ. ವೆಟ್ರಿವೇಲ್ ಯಾತ್ರೆಗೆ ಹೊರಟ ಬಿಜೆಪಿ ಕಾರ್ಯಕರ್ತರನ್ನು ಚೆನ್ನೈ-ತಿರುವಳ್ಳೂರು ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ.

ವೆಟ್ರಿವೇಲ್ ಯಾತ್ರೆಯಲ್ಲಿ ಮುರುಗಾ ದೇವರ ಆರು ಕ್ಷೇತ್ರಗಳಿಗೆ ಒಂದು ತಿಂಗಳ ಯಾತ್ರೆ ನಡೆಸುವುದು ಬಿಜೆಪಿಯವರ ಉದ್ದೇಶವಾಗಿತ್ತು. ತಿರುತ್ತಣಿ ದೇವಸ್ಥಾನದಿಂದ ಆರಂಭ ಗೊಂಡ ಯಾತ್ರೆಯು ತಿರುಚೆಂಡೂರು ದೇವಸ್ಥಾನದಲ್ಲಿ ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿತ್ತು. ಈ ಯಾತ್ರೆಯ ಮೂಲಕ ತಮಿಳುನಾಡಿನಲ್ಲಿ ಹಿಂದೂ ಮತಗಳನ್ನು ಕ್ರೋಢೀಕರಿಸುವುದು ಬಿಜೆಪಿಯ ಪ್ರಯತ್ನವಾಗಿದೆ ಎನ್ನಲಾಗುತ್ತಿದೆ.

- Advertisement -