ಸರ್ಕಾರಿ ವಸತಿ ಶಾಲೆಯ ಶಿಕ್ಷಕನ ಮೊಬೈಲ್​ನಲ್ಲಿ ವಿದ್ಯಾರ್ಥಿನಿಯರ 5,000 ನಗ್ನ ಫೋಟೊ & ವಿಡಿಯೋ ಪತ್ತೆ!

Prasthutha|

ಮಾಲೂರು: ಕೋಲಾರ ಜಿಲ್ಲೆಯ ಮಾಲೂರುತಾಲೂಕಿನ ಮಾಸ್ತಿ ಗಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ಮುನಿಯಪ್ಪ ಎಂಬಾತನ ಮೊಬೈಲ್​ನಲ್ಲಿ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವ ಸುಮಾರು ಐದು ಸಾವಿರ ನಗ್ನ ಫೋಟೋ ಮತ್ತು ವಿಡಿಯೋಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ.

- Advertisement -

ಕಳೆದ ವರ್ಷ ವಿದ್ಯಾರ್ಥಿಗಳಿಂದಲೇ ಶೌಚಗುಂಡಿ ಸ್ವಚ್ಛಗೊಳಿಸಿ ವಿವಾದ ಕ್ಕೀಡಾಗಿದ್ದ ಪ್ರಕರಣ ನಡೆದ ಅದೇ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿರುವ ಮುನಿಯಪ್ಪ ಶಾಲೆಯ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವ ಫೋಟೋ ಮತ್ತು ವಿಡಿಯೋಗಳನ್ನು ಗೊತ್ತಿಲ್ಲದಂತೆ ಶೂಟ್‌ ಮಾಡಿ ಇಟ್ಟುಕೊಂಡಿದ್ದಾನೆ ಎಂದು ತಡವಾಗಿ ವರದಿಯಾಗಿದೆ.

2023 ಡಿಸೆಂಬರ್ 17ರಂದು ವಿದ್ಯಾರ್ಥಿಗಳಿಂದಲೇ ಶೌಚಗುಂಡಿ ಸ್ವಚ್ಛಗೊಳಿಸಿದ ಪ್ರಕರಣ ನಡೆದಿದ್ದು, ಅದರ ಸಂಬಂಧವಾಗಿ ತನಿಖಾಧಿಕಾರಿಗಳು ಶಾಲೆಗೆ ಆಗಮಿಸಿ ತನಿಖೆ ಆರಂಭಿಸಿದ್ದರು. ಆ ಸಂದರ್ಭದಲ್ಲಿ, ಅಲ್ಲಿದ್ದ ಎಲ್ಲ ಶಿಕ್ಷಕರ ಮೊಬೈಲ್‌ ಗಳನ್ನು ವಶಕ್ಕೆ ಪಡೆಯಲಾಗಿತ್ತು. ಆಗ ಮುನಿಯಪ್ಪನವರ ಮೊಬೈಲ್ ಕೂಡ ವಶಕ್ಕೆ ಸಿಕ್ಕಿತ್ತು. ವಶಪಡಿಸಿಕೊಂಡ ಮೊಬೈಲ್‌ಗಳಲ್ಲಿರುವ ದತ್ತಾಂಶಗಳನ್ನು ಪರಿಶೀಲಿಸುವಾಗ ಮುನಿಯಪ್ಪನವರ ಮೊಬೈಲ್‌ನಲ್ಲಿ ಬಾಲಕಿಯರ ನಗ್ನ ಫೋಟೋಗಳು, ಬಟ್ಟೆ ಬದಲಿಸುವಾಗ ತೆಗೆದಿರಬಹುದಾದ ಫೋಟೋಗಳು ಸಿಕ್ಕಿವೆ. ಇಂಥದ್ದೇ ಕೆಲವು ವಿಡಿಯೋ ಗಳೂ ಕೂಡ ಸಿಕ್ಕಿವೆ ಎಂದು ವರದಿಯಾಗಿದೆ.

- Advertisement -

ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಮುನಿಯಪ್ಪನವರನ್ನು ಬಂಧಿಸಿದ್ದರು. ತಮ್ಮ ಬಂಧನದ ವಿರುದ್ಧ ಕೆಳ ಹಂತದ ನ್ಯಾಯಲಯದ ಮೊರೆ ಹೋಗಿದ್ದ. ಅಲ್ಲಿ ಆತನಿಗೆ ವ್ಯತಿರಿಕ್ತ ತೀರ್ಪು ಬಂದಿತ್ತು. ತನ್ನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿತ ಶಿಕ್ಷಕ ತನ್ನ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದುಗೊಳಿಸುವಂತೆ ಹೈಕೋರ್ಟ್‌ ಮೆಟ್ಟಿಲೇರಿದ್ದ. ಇದೀಗ ಈ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್‌ ಪೋಕ್ಸೋ ಕೇಸ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರದ್ದುಗೊಳಿಸಿದೆ.



Join Whatsapp