ಬೆಂಗಳೂರು: ಈಡಿಗ ಸಮುದಾಯದ ಅಭಿವೃದ್ಧಿ ನಿಗಮಕ್ಕೆಗೆ 500 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಕರ್ನಾಟಕದ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವದಲ್ಲಿ ಅವರು ಮಾತನಾಡಿದ ಶಿವಕುಮಾರ್, ಈಗ ಅಧಿವೇಶನ ನಡೆಯುತ್ತಿರೋದರಿಂದಾಗಿ ಅಧಿಕೃತ ಘೋಷಣೆ ಮಾಡಲು ಆಗುವುದಿಲ್ಲ. ನಿಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡುತ್ತೇನೆ ಎಂದಿದ್ದಾರೆ.
ಈಡಿಗ ಸಮುದಾಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಒಟ್ಟಾಗಿ ಶ್ರಮಿಸಿದೆ. ನಿಮ್ಮ ಬೆಂಬಲಕ್ಕೆ ಎಷ್ಟು ಅಭಿನಂದನೆ ತಿಳಿಸಿದರೂ ಸಾಲದು. ನಾವು ನಿಮಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳುತ್ತೇವೆ. ವಿಧಾನಸಭಾ ಚುನಾವಣೆಯಲ್ಲಿ ಮತ್ತು ಇಂದು ಈಡಿಗ ಸಮುದಾಯದವರೆಲ್ಲಾ ಒಗ್ಗಟ್ಟಾಗಿ, ಸಿದ್ದರಾಮಯ್ಯನವರ ಸರ್ಕಾರದ ಜೊತೆಗೆ ಇದ್ದೇವೆ ಎಂಬ ಸಂದೇಶ ನೀಡಿದ್ದೀರಿ. ಇದಕ್ಕೆ ನಾನು ಆಭಾರಿ ಎಂದು ಡಿಕೆ ಶಿವಕುಮಾರ್ ಹೇಳಿದರು.
ವಿದ್ಯೆಯಿಂದ ವಿವೇಕವಂತರಾಗಬೇಕು, ಸಂಘಟನೆಯಿಂದ ಬಲಿಷ್ಠರಾಗಬೇಕು ಎನ್ನುವ ನಾರಾಯಣಗುರುಗಳ ಮಾತುಗಳನ್ನು ನಾವು ಮತ್ತು ನೀವು ಎಂದಿಗೂ ಮರೆಯಬಾರದು. ನಾನು, ಸಿದ್ದರಾಮಯ್ಯನವರು ಮತ್ತು ನಮ್ಮ ಶಾಸಕರು ಚಪ್ಪಾಳೆ ಗಿಟ್ಟಿಸಿಕೊಳ್ಳಲು ಸಮಾರಂಭಕ್ಕೆ ಬಂದಿಲ್ಲ. ಬದಲಾಗಿ ನಾವೂ ನಿಮ್ಮ ಜೊತೆಗೆ ಇದ್ದೇವೆ ಎಂದು ಹೇಳುವುದಕ್ಕಾಗಿ ಬಂದಿದ್ದೇವೆ ಎಂದು ಅವರು ಹೇಳಿದರು.