ಜೆಡಿಎಸ್ ಸರಕಾರ ಬಂದರೆ ಅಡುಗೆ ಅನಿಲ ಸಿಲಿಂಡರ್ ಗೆ 50% ಸಬ್ಸಿಡಿ: ಪಂಚರತ್ನ ರಥಯಾತ್ರೆಯಲ್ಲಿ HDK ಘೋಷಣೆ

Prasthutha|

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ ಅಡುಗೆ ಅನಿಲ ಸಿಲಿಂಡರ್ ಗೆ ಶೇ.50ರಷ್ಟು ಸಬ್ಸಿಡಿ ನೀಡುವ ಮಹತ್ವದ ಘೋಷಣೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿದ್ದಾರೆ.
ಯಶವಂತಪುರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಸುವ ವೇಳೆ ಮಧ್ಯಾಹ್ನದ ಭೋಜನ ವಿರಾಮದ ವೇಳೆ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಕೇಂದ್ರ ಸರಕಾರ ಪುಕ್ಕಟ್ಟೆ ಗ್ಯಾಸ್ ನೀಡುವುದಾಗಿ ಹೇಳಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿದೆ. ಇದನ್ನು ನಂಬಿದ ಮಹಿಳೆಯರಿಗೆ ಒಂದು ಸಿಲಿಂಡರ್ ಕೊಟ್ಟ ಮೇಲೆ ಬೆಲೆ ಏರಿಕೆಯ ಶಾಕ್ ನೀಡಿತು. ಈಗ ಸಿಲಿಂಡರ್ ಬೆಲೆ ಸಾವಿರ ರೂಪಾಯಿ ದಾಟಿದ್ದು, ಬಡಜನರು ಜೀವನ ಸಾಗಿಸುವುದೇ ದುಸ್ತರವಾಗಿದೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ನಮ್ಮಲ್ಲಿ ಅಡುಗೆ ಅನಿಲ ರಿಯಾಯಿತಿ ಒಂದೇ ಯೋಜನೆ ಅಲ್ಲ, ಇನ್ನೂ ಹಲವಾರು ಯೋಜನೆಗಳು ಇವೆ. ವರ್ಷಕ್ಕೆ ಐದು ಸಿಲಿಂಡರ್ ಉಚಿತವಾಗಿ ಸಿಗಲಿವೆ. 10 ಸಿಲಿಂಡರ್ ಗೆ ಅರ್ಧ ಹಣ ಪಡೆಯಲಿದ್ದೇವೆ. ಇನ್ನು; ಆಟೋ ಚಾಲಕರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಕೊಡಲಾಗುವುದು. ಹಾಗೆಯೇ, ಅಂಗನವಾಡಿ ಕಾರ್ಯಕರ್ತರ ಶಾಶ್ವತ ಬೇಡಿಕೆ ಏನಿದೆ ಅದನ್ನು ಈಡೇರಿಸುವ ಕೆಲಸ ಮಾಡುತ್ತೇವೆ. ಈ ಬಗ್ಗೆ ಆರ್ಥಿಕ ತಜ್ಞರ ಜೊತೆ ಚರ್ಚೆ ಮಾಡಲಾಗುತ್ತದೆ ಎಂದು ಅವರು ಘೋಷಣೆ ಮಾಡಿದರು.



Join Whatsapp