ರಾಜ್ಯದಲ್ಲಿ 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ: ಸಚಿವ ಮುರುಗೇಶ್ ನಿರಾಣಿ

Prasthutha: May 27, 2022

ಬೆಂಗಳೂರು: ಮುಂಬರುವ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 5 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಪಾಲ್ಗೊಂಡು ಬೆಂಗಳೂರಿಗೆ ಆಗಮಿಸಿದ ಅವರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗಾಗಲೇ ನಿಗದಿಯಾಗಿರುಂತೆ  ನವೆಂಬರ್ 2ರಿಂದ 4ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ. ವಿಶ್ವದ ಮುಂಚೂಣಿಯಲ್ಲಿರುವ ಅನೇಕ ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿದ್ದಾರೆ. ಅಂದಾಜು 5 ಲಕ್ಷ ಕೋಟಿ ಹೂಡಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.

ದಾವೋಸ್ ನಲ್ಲಿನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಾನು  ವಿಶ್ವದ ಪ್ರಮುಖ ಉದ್ಯಮಿಗಳನ್ನು ಭೇಟಿಯಾಗಿ ಬಂಡವಾಳ ಹೂಡಿಕೆ ಸಂಬಂಧ ಮಾತುಕತೆ ನಡೆಸಿದ್ದೇವೆ ಇದೊಂದು ಯಶಸ್ವಿ ಪ್ರವಾಸ ಎಂದು ಅವರು ಬಣ್ಣಿಸಿದರು.

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂಚೂಣಿಯಲ್ಲಿರುವ ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ಇಲ್ಲಿನ ಆಹ್ಲಾದಕರ ವಾತಾವರಣ, ಉದ್ಯಮಿಗಳ ಪರವಾಗಿರುವ ಸರ್ಕಾರ,  ಕೈಗಾರಿಕಾ ಸ್ನೇಹಿ ನೀತಿಗಳು, ಉದ್ಯಮಿಗಳಿಗೆ ಬೇಕಾಗಿರುವ ರಸ್ತೆ, ನೀರು, ವಿದ್ಯುತ್ ಸೇರಿದಂತೆ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳು ರಾಜ್ಯದಲ್ಲಿ ಸಿಗುವುದರಿಂದ ಉದ್ಯಮಿಗಳು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.

ದೊಡ್ಡ ಮಟ್ಟದ ಬಂಡವಾಳ ಹೂಡಿಕೆಯಾದರೆ ಕೈಗಾರಿಕೆಗಳು ಹೆಚ್ಚು ಹೆಚ್ಚು ಸ್ಥಾಪನೆಯಾಗಲಿವೆ. ಇದರಿಂದ  ಸ್ಥಳೀಯರಿಗೆ ಉದ್ಯೋಗ ಅವಕಾಶಗಳು ಲಭಿಸಲಿವೆ. ಜೊತೆಗೆ ನಿರುದ್ಯೋಗವು ನಿವಾರಣೆಯಾಗಲಿದೆ ಎಂದು ನಿರಾಣಿ ಅಭಿಪ್ರಾಯಪಟ್ಟರು.

ನಾಲ್ಕು ದಿನ ನಾವು ವಿವಿಧ ಕೈಗಾರಿಕೋದ್ಯಮಿಗಳನ್ನು ಭೇಟಿಯಾಗಿದ್ದೇವೆ. ಬಂಡವಾಳ ಹೂಡಿಕೆ ಮಾಡುವಂತೆ ನಾವು ಮುಂದಿಟ್ಟ ಪ್ರಸ್ತಾವನೆಗೆ ಅನೇಕ ಉದ್ಯಮಿಗಳು ಒಪ್ಪಿಗೆ ಸೂಚಿಸಿದ್ದಾರೆ. ಅಂದಾಜು ಒಂದು ಲಕ್ಷ ಕೋಟಿ ಬಂಡವಾಳ ರಾಜ್ಯದಲ್ಲಿ ಹೂಡಿಕೆಯಾಗಲಿದೆ. ಬಂಡವಾಳ ಹೂಡಿಕೆಯಾಗುವುದರಿಂದ ರಾಜ್ಯದ ಜಿಡಿಪಿ ದರವು ಏರಿಕೆಯಾಗಲಿದೆ  ಎಂದರು.

 ನವೆಂಬರ್ ನಲ್ಲಿ ನಡೆಯಲಿರುವ ಹೂಡಿಕೆದಾರರ ಸಮಾವೇಶಕ್ಕೆ ಖ್ಯಾತ ಉದ್ಯಮಿಗಳು  ಆಗಮಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಕರ್ನಾಟಕ ಕೈಗಾರಿಕಾ ವಲಯದಲ್ಲಿ ಸಾಧಿಸಿರುವ ಪ್ರಗತಿಯ ಚಿತ್ರಣವನ್ನು ತೆರೆದಿಟ್ಟಿದ್ದೇವೆ. ಬಹುತೇಕರು ನಮ್ಮ ರಾಜ್ಯದ  ಬಗ್ಗೆ ವಿಶೇಷವಾದ ಆಸಕ್ತಿಯನ್ನು ತೋರಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ರಾಜ್ಯದ ಚಿತ್ರಣವೇ ಬದಲಾಗಿದೆ  ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!