ಮಂಗಳೂರು: ಆರ್ ಟಿಐ ಕಾರ್ಯಕರ್ತ ಶ್ಯಾನುಭೋಗ್ ದೊಡ್ಡ ಭ್ರಷ್ಟಾಚಾರಿ ಆಗಿದ್ದು, ಅವರು ನಾನು ಪಡೆದ ಗೌರವ ಧನವನ್ನೇ ಭ್ರಷ್ಟಾಚಾರ, ಲಂಚ ಎಂದಿರುವುದು ಖಂಡನೀಯ ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಸ್ಪಷ್ಟಪಡಿಸಿದ್ದಾರೆ.
ಅವರು ಅಕಾಡೆಮಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರ್ ಟಿಐ ಕಾರ್ಯಕರ್ತ ಅರವಿಂದ ಶ್ಯಾನುಭಾಗ ಅವರು ವಾರ್ಷಿಕ 5 ಲಕ್ಷದಷ್ಟು ಆದಾಯ ಹೊಂದಿದ್ದರೂ ಬಿಪಿಎಲ್ ಕಾರ್ಡ್ ಹೊಂದಿದ್ದರು. ಅದು ತನಿಖೆಯಾಗಿ ರದ್ದುಗೊಂಡಿದೆ. ಉಪನ್ಯಾಸಕ, ಕೊಂಕಣಿ ಲೇಖಕ ಎಂದಿತ್ಯಾದಿಯಾಗಿ ಹೇಳಿಕೊಳ್ಳುವ ಈ ಅರವಿಂದ ಶ್ಯಾನುಭಾಗ ಅವರು ತನ್ನ ಬಿಪಿಎಲ್ ಕಾರ್ಡ್ ಬಳಸಿ ಬೇರೆಯವರಿಗೆ ಆರ್ ಟಿಐ ಮಾಹಿತಿ ಪಡೆದು ನೀಡುವುದನ್ನೇ ಮುಖ್ಯ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವುದು ಗೊತ್ತಾಗಿದೆ ಎಂದು ರಹೀಂ ಉಚ್ಚಿಲ್ ತಿಳಿಸಿದರು.
28,000 ರೂಪಾಯಿ ಗೌರವ ಮಾಸಿಕ ಧನ ನಾನು ನಿಯಮದಂತೆ ಪಡೆದಿದ್ದೇನೆ. ಇನ್ನು ನಾನು ಕೊರೋನಾ ಕಾಲದಲ್ಲಿ ಹಂಚಿದ 140 ಕಿಟ್ ಗಳಿಗೆ ಸಂಬಂಧಿಸಿದಂತೆ 40% ಹಣವನ್ನು ಸ್ವಂತ ಹಣದಿಂದ ನೀಡಿದ್ದೇವೆ. ಇನ್ನು ಕಲಾವಿದರಿಗೆ ನೀಡಿದ ರೂ. 2,000 ಹಣದ ಬಗೆಗೆ ಫಲಾನುಭವಿಗಳ ಎಲ್ಲ ದಾಖಲೆ ಇಟ್ಟಿದ್ದೇವೆ. ಎಲ್ಲ ಅಕಾಡೆಮಿಯವರು ಸಹ ಗೌರವ ಧನ ಪಡೆಯುತ್ತಾರೆ. ಆದರೆ ಈ ಶ್ಯಾನುಭಾಗ ತುಳು ಅಕಾಡೆಮಿ ಮತ್ತು ಬ್ಯಾರಿ ಅಕಾಡೆಮಿಯ ಅಧ್ಯಕ್ಷರ ಬಗೆಗೆ ಮಾತ್ರ ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿದ್ದಾರೆ ಎಂದು ಉಚ್ಚಿಲ್ ಕಿಡಿಕಾರಿದರು.
ಗೌರವ ಉಪನ್ಯಾಸಕ ಎಂದು ಚೈತನ್ಯ ವಿದ್ಯಾ ಸಂಸ್ಥೆಯಲ್ಲಿ ಒಂದು ತರಗತಿ ಕೂಡ ನಡೆಸದೆ 1,17,959 ರೂಪಾಯಿ ಪಡೆದಿರುವುದನ್ನು ಆ ಸಂಸ್ಥೆಯ ಪ್ರಿನ್ಸಿಪಾಲರೇ ತಿಳಿಸಿದ್ದಾರೆ. ಶಾರದಾ ವಿದ್ಯಾ ಸಂಸ್ಥೆಯಲ್ಲೂ ಗೌರವ ಉಪನ್ಯಾಸಕ ಎಂದು ಸೇರಿದ್ದಾರೆ. ಡಿಡಿಪಿಐ ಮೂಲಕ ಹಣ ಪಡೆದಿದ್ದಾರೆ. ಶ್ಯಾನುಭಾಗ ಬ್ಲಾಕ್ ಮೇಲ್ ವ್ಯಕ್ತಿ ಎಂದು ಸ್ಪಷ್ಟವಾಗಿದೆ. ಈ ವ್ಯಕ್ತಿಯ ವಿರುದ್ಧ ನಾನು 5 ಲಕ್ಷ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ರಹೀಂ ಉಚ್ಚಿಲ್ ಹೇಳಿದರು.