ನವದೆಹಲಿ: ಜೂನ್ ನಾಲ್ಕರಂದು 2004ರ ಫಲಿತಾಂಶ ಪುನರಾವರ್ತನೆಯಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ನಾವು ಲಖನೌ ಮೂಲಕ ದೆಹಲಿ ತಲುಪುತ್ತೇವೆ. ಉತ್ತರ ಪ್ರದೇಶದಲ್ಲಿ 80 ಸ್ಥಾನಗಳಿವೆ. ರಾಹುಲ್ ಗಾಂಧಿ ನೇತೃತ್ವದ ‘ನ್ಯಾಯ ಯಾತ್ರೆ’ಗೆ ಪ್ರಯಾಗ್‌ರಾಜ್, ವಾರಾಣಸಿ, ಪ್ರತಾಪ್‌ಗಢ, ಲಖನೌ, ಅಮೇಠಿ, ರಾಯ್‌ಬರೇಲಿ, ಅಲೀಗಢ, ಮೊರಾದಾಬಾದ್, ಅಮ್ರೋಹಾ ಮತ್ತು ಸಂಭಲ್‌ನಲ್ಲಿ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ ಎಂದು ಅವರು ಹೇಳಿದರು.
ಉತ್ತರ ಪ್ರದೇಶದಲ್ಲಿ ಯುವಜನತೆ, ಮಹಿಳೆಯರು, ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯದವರು ನ್ಯಾಯ ಯಾತ್ರೆಗೆ ಬೆಂಬಲ ಸೂಚಿಸಿದ್ದರು. ಈ ಬಾರಿ ಪ್ರಧಾನಿಗೆ ಸಂಪೂರ್ಣ ಭ್ರಮನಿರಸನ ಕಾದಿದೆ. ಜನ ಅವರ ಬಗ್ಗೆ ನಿರಾಸೆಗೊಂಡಿದ್ದಾರೆ. ಜೂನ್ ನಾಲ್ಕರ ನಮ್ಮ ಫಲಿತಾಂಶದಲ್ಲಿ ದೊಡ್ಡ ಪಾಲು ಉತ್ತರ ಪ್ರದೇಶದಿಂದ ಬರಲಿದೆ. ಅಲ್ಲಿ ಈ ಬಾರಿ ಸಂಪೂರ್ಣ ಬದಲಾವಣೆ ಆಗಲಿದೆ’ ಎಂದು ತಿಳಿಸಿದರು.