ಕುಖ್ಯಾತಿ ಪಡೆಯಲು ರೈತ ಮುಖಂಡ ಟಿಕಾಯತ್ ಗೆ ಮಸಿ: 450 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

Prasthutha|

ಬೆಂಗಳೂರು: ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೈಗ್ರೌಂಡ್ಸ್ ಠಾಣಾ ಪೊಲೀಸರು 450 ಪುಟಗಳ ಆರೋಪಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಿದ್ದಾರೆ.

- Advertisement -

ಘಟನೆ ಸಂಬಂಧ 20 ಮಂದಿ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನು ಉಲ್ಲೇಖಿಸಿ 60 ದಿನಗಳಲ್ಲೇ ಪ್ರಕರಣ ಸಂಬಂಧ 450 ಪುಟಗಳ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

ಚಾರ್ಜ್ ಶೀಟ್ ಸಲ್ಲಿಕೆ ಬೆನ್ನಲ್ಲೇ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಮಸಿ ಬಳಿಯಲು ವಾರದಿಂದ ಪೋನಿನಲ್ಲಿ ನಡೆಸಿದ ಸಂಭಾಷಣೆ, ಟೆಕ್ನಿಕಲ್ ದಾಖಲೆ, ಸಿಸಿಟಿವಿ ವಿಡಿಯೋ ವಿವರಗಳನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

- Advertisement -

ಸಮಾಜದಲ್ಲಿ ಗುರುತಿಸಿಕೊಳ್ಳಬೇಕು, ಖ್ಯಾತಿ ಕುಖ್ಯಾತಿ ಪಡೆಯಬೇಕು, ಕೇಂದ್ರದ ಪ್ರಮುಖ ನಾಯಕರು ಗುರುತಿಸಬೇಕೆಂದು ಆರೋಪಿಗಳು ಮಸಿ ಬಳಿದಿದ್ದಾರೆ. ಕರ್ನಾಟಕದಲ್ಲಿ ಜನಪ್ರಿಯರಾಗಬೇಕು, ಎಲ್ಲೇ ಹೋದರೂ ನಮ್ಮ ಕಡೆಯೇ ಎಲ್ಲರ ಗಮನ ಇರಬೇಕು ಎಂಬ ಆಶಯವನ್ನು ಹೊಂದಿದ್ದರು ಎಂದು ದೋಷಾರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ರಾಕೇಶ್ ಟಿಕಾಯತ್ ಅವರು ಕಳೆದ ಮೇ 29 ರಂದು ನಗರಕ್ಕೆ ಬಂದ ದಿನವೇ ಮೊಟ್ಟೆ, ಕೊಳೆತ ಟೊಮೆಟೊ ಎಸೆಯಲು ಸಂಚು ಮಾಡಿದ್ದರು. ಆದರೆ ಈ ಸಂಚು ಸಾಧ್ಯವಾಗದ ಹಿನ್ನೆಲೆಯಲ್ಲಿ ಗಾಂಧಿಭವನ ಬಳಿಯೂ ಮೊಟ್ಟೆಯನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಪೊಲೀಸ್ ಭದ್ರತೆ ಹಿನ್ನೆಲೆಯಲ್ಲಿ ವೇದಿಕೆಗೆ ಬಾಟಲಿಯಲ್ಲಿ ಮಸಿ ತೆಗೆದುಕೊಂಡು ಹೋಗಿದ್ದರು. ಆರೋಪಿಗಳು ಟಿಕಾಯತ್ ಮೇಲೆ ಹಲ್ಲೆ ಮಾಡುವ ಯೋಚನೆ ಇರಲಿಲ್ಲ. ಆದರೆ ಶಿವಕುಮಾರ್ ಉದ್ರೇಕಗೊಳಗಾಗಿ ಲೋಗೊದಿಂದಲೇ ಹಲ್ಲೆ ಮಾಡಿದ್ದಾನೆ ಎಂದು ಉಲ್ಲೇಖಿಸಲಾಗಿದೆ.

ಏನಿದು ಪ್ರಕರಣ:

ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಗಾಂಧಿ ಭವನದಲ್ಲಿ ಮೇ 30 ರಂದು ಸಭೆ ಕರೆಯಲಾಗಿತ್ತು. ರಾಕೇಶ್ ಸಿಂಗ್ ಟಿಕಾಯತ್, ಯುದ್ದವೀರ ಸಿಂಗ್ , ಪ್ರೊಫೆಸರ್ ರವಿ ವರ್ಮಕುಮಾರ್, ಚುಕ್ಕಿ ನಂಜುಂಡಸ್ವಾಮಿ ಅವರು ವೇದಿಕೆಯಲ್ಲಿದ್ದರು.

ಈ ವೇಳೆ ಏಕಾಏಕಿ ನುಗ್ಗಿದ ಗ್ಯಾಂಗ್, ಟಿಕಾಯತ್ ಮುಖಕ್ಕೆ ಮಸಿ ಬಳಿದು ಮೋದಿ ಮೋದಿ, ನಕಲಿ ಹೋರಾಟಗಾರರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಮಾರಾಮಾರಿ ನಡೆದಿದ್ದು ಅಲ್ಲಿದ್ದ ವ್ಯಕ್ತಿಗಳು ಇವರನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭರತ್ ಶೆಟ್ಟಿ, ದಿಲೀಪ್ ಹಾಗೂ ಶಿವಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದರು.



Join Whatsapp