40 ಲಕ್ಷ ಲಂಚ, 8 ಕೋಟಿ ನಗದು ಪತ್ತೆ: ಲೋಕಾಯುಕ್ತ FIRನಲ್ಲಿ ಶಾಸಕ ಮಾಡಾಳ್ ಎ-1 ಆರೋಪಿ

Prasthutha|

ಬೆಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಪ್ರಶಾಂತ್ ಲೋಕಾಯುಕ್ತ ಬಲೆಗೆ ಬಿದ್ದು 8 ಕೋಟಿ ನಗದು ಪತ್ತೆಯಾದ ಪ್ರಕರಣದಲ್ಲಿ ಪ್ರಶಾಂತ್ ಮಾಡಾಳ್ ಸೇರಿ ಆರು ಜನರ ಮೇಲೆ ಎಫ್’ಐಆರ್ ದಾಖಲಾಗಿದೆ.

- Advertisement -

ಪ್ರಕರಣದಲ್ಲಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಎ-1 ಆರೋಪಿಯಾಗಿದ್ದು, ಅವರ ಪುತ್ರ ಎ-2 ಆರೋಪಿಯಾಗಿರುವುದು ಬಯಲಾಗಿದೆ. ಟೆಂಡರ್’ಗಾಗಿ 40 ಲಕ್ಷ ರೂ ಲಂಚ ಪಡೆಯುವಾಗ ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದರು.

ಬಳಿಕ ಲೋಕಾಯುಕ್ತರು, ನಗರದ ಪ್ರಶಾಂತ್ ನಿವಾಸದ ಮೇಲೆ ದಾಳಿ ಮಾಡಿದ್ದರು. ಈ ವೇಳೆ, ಕೋಟಿ ಕೋಟಿ ಹಣ ಪತ್ತೆಯಾಗಿತ್ತು. ಇನ್ನು ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿರುವ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ನಿವಾಸದ ಮೇಲೂ ಲೋಕಾ ದಾಳಿ ಮಾಡಿದೆ.

- Advertisement -

ಪ್ರಕರಣ ಸಂಬಂಧ ಬಂಧಿತ ಪ್ರಶಾಂತ್ ಮಾಡಾಳ್ ಸೇರಿ ಐವರಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನು ಕೆಎಸ್’ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ನಾಪತ್ತೆಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಶಾಸಕರನ್ನು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಶ್ರೇಯಸ್ ಕಶ್ಯಪ್ ಕೆಮಿಕಲ್ ಹೆಸರಿನ ಕಂಪನಿಯ ಪಾಲುದಾರ ನೀಡಿದ ದೂರಿನ ಅನ್ವಯ ಎ1 ಆರೋಪಿಯಾಗಿ ವಿರೂಪಾಕ್ಷಪ್ಪ ಮಾಡಾಳ್, ಎ 2 ಆರೋಪಿ ಪ್ರಶಾಂತ ಮಾಡಾಳ್, ಲೆಕ್ಕಾಧಿಕಾರಿ ಸುರೇಂದ್ರ, ಪ್ರಶಾಂತ ಮಾಡಾಳ್ ಸಂಬಂಧಿ ಸಿದ್ದೇಶ್, ಕರ್ನಾಟಕ ಅರೋಮಾಸ್ ಕಂಪನಿಯ ಸಿಬ್ಬಂದಿಗಳಾದ ಆಲ್ಬರ್ಟ್ ನಿಕೋಲಾ, ಗಂಗಾಧರ್ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ.

ಶಾಸಕರ ಪುತ್ರನ ಕಚೇರಿ ಮತ್ತು ಮನೆ ಮೇಲಿನ ದಾಳಿಯಲ್ಲಿ ಒಟ್ಟು 8 ಕೋಟಿ 12 ಲಕ್ಷದ 30 ಸಾವಿರ ನಗದು ವಶ ಪಡಿಸಿಕೊಳ್ಳಲಾಗಿದೆ. ಇನ್ನು ದಾಖಲಾತಿಗಳ ಪರಿಶೀಲನೆ ಮುಂದುವರೆದಿದೆ. ಐಜಿಪಿ ಸುಬ್ರಮಣ್ಯೇಶ್ವರ ರಾವ್, ಲೋಕಾಯುಕ್ತ ಎಸ್.ಪಿ ಅಶೋಕ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ತನಿಖೆ ತೀವ್ರಗೊಳಿಸಿದ್ದ ಲೋಕಾ ಅಧಿಕಾರಿಗಳು, ಪ್ರಶಾಂತ್ ಮಾಡಾಳ್ ಮನೆಯಲ್ಲಿ 6 ಕೋಟಿ ರೂ ಹಣ ಪತ್ತೆಮಾಡಿ ಜಪ್ತಿ ಮಾಡಿಕೊಂಡಿದ್ದಾರೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ವಿರೂಪಾಕ್ಷಪ್ಪ ಮಾಡಾಳ್ ಅವರು ರಾಜೀನಾಮೆ ನೀಡಿ, ಸಿಎಂ ಕಚೇರಿಗೆ ಪತ್ರ ಸಲ್ಲಿಸಿದ್ದಾರೆ.

ಲಂಚ ಸ್ವೀಕಾರ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಇವರ ಪುತ್ರ ಪ್ರಶಾಂತ್ ಮಾಡಾಳ್ ಬಂಧನದ ಬಳಿಕ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ.

Join Whatsapp