ತೆಲಂಗಾಣದಲ್ಲಿ ಒಂದೇ ದಿನ 40 ಜನ ಪತ್ರಕರ್ತರ ಬಂಧನ

Prasthutha|

ಹೈದರಾಬಾದ್: ಜನವರಿ 6ರಂದು ತೆಲಂಗಾಣ ಪೊಲೀಸರು 40 ಜನ ಪತ್ರಕರ್ತರು ಮತ್ತು ಯೂಟ್ಯೂಬರ್ ಗಳನ್ನು ಬಂಧಿಸಿದ್ದಾರೆ. ಕಳೆದ ವರ್ಷ ಹುಜೂರಾಬಾದ್ ಉಪ ಚುನಾವಣೆಯ ವೇಳೆಯ ನಾವು ಮಾಡಿದ ವರದಿ ಹಿನ್ನೆಲೆಯಲ್ಲಿ ತಮಗೆ ತೊಂದರೆ ಕೊಡಲಾಗುತ್ತಿದೆ ಎಂದು ಬಂಧಿತ ಪತ್ರಕರ್ತರು ಆರೋಪಿಸಿದ್ದಾರೆ.

- Advertisement -

ಮುಖ್ಯಮಂತ್ರಿ ಎನ್. ಚಂದ್ರಶೇಖರರಾವ್ ವಿರುದ್ಧದ ನಿಲುವಿಗಾಗಿ ನಮ್ಮನ್ನು 12 ಗಂಟೆಗಳ ಕಾಲ ಪ್ರಶ್ನಿಸಲಾಯಿತು ಎಂದು ವರದಿಗಾರರು ಆಪಾದಿಸಿದ್ದಾರೆ. ತೋಲಿವೆಲುಗು ಚಾನೆಲ್ ನ ವರದಿಗಾರ ಮುಸಮ್ ಶ್ರೀನಿವಾಸ್ ಗೆ “ಸರಕಾರದ ವಿರುದ್ಧ ಯಾಕೆ ಮಾತನಾಡುತ್ತೀರಿ ಮತ್ತು ನೀವೇಕೆ ಮುಖ್ಯಮಂತ್ರಿ ವಿರುದ್ಧ ಇದ್ದೀರಿ ಎಂದು ಮತ್ತೆ ಮತ್ತೆ ಪ್ರಶ್ನಿಸಲಾಗಿದೆ.

ವಿಶೇಷ ತನಿಖಾ ತಂಡದ ಮೂರ್ನಾಲ್ಕು ಜನರು ಸಾದಾ ಬಟ್ಟೆಯಲ್ಲಿ ನನ್ನ ಕೋಣೆಗೆ ಬಂದು ಯಾವುದೇ ಮುನ್ಸೂಚನೆ ನೀಡದೆ, ವ್ಯಾನಿಗೆ ಹತ್ತಿಸಿಕೊಂಡು ಬಂದಿದ್ದಾರೆ ಎಂದು ಶ್ರೀನಿವಾಸ ಹೇಳುತ್ತಾರೆ. ನನ್ನ ಫೋನನ್ನು ಕಸಿದುಕೊಂಡು ಕಾನೂನುಬಾಹಿರವಾಗಿ ಫಾರ್ಮೇಟ್ ಬದಲಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

- Advertisement -

ಯೂಟ್ಯೂಬ್ ಚಾನೆಲ್ ನಡೆಸುವ ಜಿ. ಶಿವರಾಂ ಮತ್ತು ಪ್ರವೀಣ್ ರೆಡ್ಡಿಯವರಿಗೂ ಇದೇ ಅವಸ್ಥೆ ಆಗಿದೆ. ಅನುಮತಿ ಇಲ್ಲದೆ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದೀರಿ ಎಂದು ಪೋಲೀಸರು ಅವರ ಮೇಲೆ ಆರೋಪ ಹೊರಿಸಿ ಬಂಧಿಸಿದ್ದಾರೆ.

ಮುಖ್ಯಮಂತ್ರಿ, ಪ್ರಧಾನಿ, ಶಾಸಕ, ಸಂಸದರು, ಮಂತ್ರಿಗಳು, ಹಿರಿಯ ಅಧಿಕಾರಿಗಳು ಎಂದು ಕಾರಣ ನೀಡದೆ ಈ ಚಾನೆಲ್ ಗಳು ಟೀಕಿಸುವುದನ್ನೇ ಕಸುಬು ಮಾಡಿಕೊಂಡಿವೆ ಎಂದು ಕರೀಂನಗರ ಪೊಲೀಸ್ ಆಯುಕ್ತ ವಿ. ಸತ್ಯನಾರಾಯಣ ತಿಳಿಸಿದ್ದಾರೆ. ಸಮಾಜ ವೈಷಮ್ಯ ಹೆಚ್ಚಿಸುವ ಕಾರಣ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಬಂಧಿಸಲಾಗಿದೆ ಎಂದೂ ಅವರು ಹೇಳಿದರು.

ಶಿವರಾಂ ಮತ್ತು ರೆಡ್ಡಿ ಪತ್ರಕರ್ತರೆನ್ನುವುದಕ್ಕೆ ಯಾವ ಅಧಿಕೃತ ದಾಖಲೆಗಳನ್ನೂ ಹೊಂದಿಲ್ಲ. ಯಾವುದೇ ಸುದ್ದಿ ಸಮೂಹದಲ್ಲಿ ಅವರು ನೋಂದಣಿ ಮಾಡಿಕೊಂಡಿಲ್ಲ. ಪತ್ರಿಕಾ ನೋಂದಣಿ ಸಹ ಮಾಡಿಕೊಂಡಿಲ್ಲ ಎಂದೂ ಕಮಿಶನರ್ ತಿಳಿಸಿದರು.

Join Whatsapp