ಶೇ.40 ಕಮಿಷನ್ ಭ್ರಷ್ಟಾಚಾರ, ಬಿಟ್ ಕಾಯಿನ್ ಲೂಟಿಯನ್ನು ನ್ಯಾಯಾಂಗ ತನಿಖೆಗೊಳಪಡಿಸಿ: ಎಡಪಕ್ಷಗಳ ಒತ್ತಾಯ

Prasthutha|

ಬೆಂಗಳೂರು: ಶೇ.40 ಕಮಿಷನ್ ಭ್ರಷ್ಟಾಚಾರ, ಬಿಟ್ ಕಾಯಿನ್ ಲೂಟಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೊಳಪಡಿಸಿ ಇಲ್ಲವೇ ತೊಲಗಿ ಎಂದು ಎಡ ಪಕ್ಷಗಳು ಒತ್ತಾಯಿಸಿವೆ.

- Advertisement -

ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ, ಪ್ರತಿಯೊಂದು ಗುತ್ತಿಗೆ ಕೆಲಸದಲ್ಲಿ ರಾಜ್ಯ ಸರಕಾರದ ಸಚಿವರು, ಶಾಸಕರು, ಅಧಿಕಾರಿಗಳು, ಒಟ್ಟು ಕಾಮಗಾರಿಯ ಶೇ. 40ರಷ್ಟು ಕಮಿಷನ್ ಪಡೆಯುತ್ತಿರುವುದು ಮತ್ತು ಇದರಿಂದ ಕಾಮಗಾರಿ ನಿರ್ವಹಣೆಗೆ, ಗುತ್ತಿಗೆದಾರರಿಗೆ ತೀವ್ರ ತೊಂದರೆಯಾಗಿದೆಯೆಂದು, ಇದನ್ನು ತಡೆಯಲು ಅಗತ್ಯ ಕ್ರಮವಹಿಸುವಂತೆ ಸ್ವತಃ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ದೇಶದ ಪ್ರಧಾನ ಮಂತ್ರಿಗಳಿಗೆ ಕಳೆದ ಐದಾರು ತಿಂಗಳುಗಳ ಹಿಂದೆಯೇ ಬಹಿರಂಗ ಪತ್ರ ಬರೆದು ಒತ್ತಾಯಿಸಿದೆ ಎಂದು ತಿಳಿಸಿದರು.

ಬೆಳಗಾವಿಯ ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ ಪಾಟೀಲ್ ಗುತ್ತಿಗೆ ಕಾಮಗಾರಿಯ ಶೇ. 40 ಕಮಿಷನ್ ಒತ್ತಡದಿಂದ ಉಂಟಾದ ಸಾಲದ ಬಾಧೆಯೇ ತನ್ನ ಆತ್ಮಹತ್ಯೆಗೆ ಕಾರಣವೆಂದು ಡೆತ್ ನೋಟ್ ಬರೆದಿದ್ದಾರೆ ಮತ್ತು ಕೆ.ಎಸ್. ಈಶ್ವರಪ್ಪರವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

- Advertisement -

ಇದರ ನಂತರ ಗೋಶಾಲೆಗಳಿಗೆ ಮೇವು ಒದಗಿಸುವ ಗುತ್ತಿಗೆದಾರರು ಮತ್ತು ಮಠಾಧೀಶರುಗಳು ಮಠಗಳಿಗೆ ನೀಡುವ ಅನುದಾನದಲ್ಲೂ ಈ ಕಮಿಷನ್ ವ್ಯವಹಾರವು ದಟ್ಟವಾಗಿರುವುದನ್ನು ಬಹಿರಂಗಪಡಿಸಿದ್ದಾರೆ ಎಂದರು.

ದಶ ಸಾವಿರ ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಹಣಕಾಸು ಸಂಸ್ಥೆಗಳ ಸರ್ವರ್ಗಳ ಹ್ಯಾಕಿಂಗ್ ಹಗರಣದಲ್ಲಿ ಪಾಲ್ಗೊಂಡ ಆರೋಪಿಯು, ರಾಜ್ಯ ಸರಕಾರದ ಇಲಾಖೆಗಳು ಮತ್ತು ಸಂಸ್ಥೆಗಳ ಸರ್ವರ್ಗಳಿಗೆ ಕನ್ನ ಹಾಕಿ ಅಪಾರ ಪ್ರಮಾಣದ ಹಣವನ್ನು ಲಪಟಾಯಿಸಿರುವುದು ಮತ್ತು ಈತನ ಜೊತೆ ರಾಜ್ಯದ ಕೆಲ ಪ್ರಭಾವಿ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಕೈ ಜೋಡಿಸಿ ಪಾಲು ಪಡೆದಿರುವುದು ಈಗಾಗಲೇ ಬಯಲಾಗಿದೆ. ಜನಾಧನ ಖಾತೆಯೊಂದರಿಂದಲೇ ಸುಮಾರು 6,000 ಕೋಟಿ ರೂ. ಲಪಟಾಯಿಸಲಾಗಿದೆಯೆನ್ನಲಾಗಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಗಂಗಾ ಕಲ್ಯಾಣ ಯೋಜನೆಯಲ್ಲಿನ ಸಾವಿರಾರು ಕೋಟಿ ರೂ.ಗಳ ಭಾರಿ ಪ್ರಮಾಣದ ಅವ್ಯವಹಾರ ಮತ್ತು ಭ್ರಷ್ಟಾಚಾರವನ್ನು ಸರಕಾರ ರಚಿಸಿದ ಸದನ ಸಮಿತಿಯೇ ಬಹಿರಂಗ ಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಆಸ್ತಿ-ಪಾಸ್ತಿಗಳ ವರ್ಗಾವಣೆ ಮತ್ತು ಪಾಲು ವಿಭಾಗದ ಸಂದರ್ಭಗಳಲ್ಲಿಯೂ, ಭೂಮಿಗಳ ಸರ್ವೇ ಮಾಡಿಸುವಾಗಲೂ, ರೈತರೂ ಸೇರಿದಂತೆ ಎಲ್ಲ ನಾಗರೀಕರು ತೀವ್ರ ಆಕ್ರೋಶಗೊಂಡಿದ್ದಾರೆ. ಕಂದಾಯ ಇಲಾಖೆಯು ಗಬ್ಬೆದ್ದು ನಾರುತ್ತಿದೆ. ಪೊಲೀಸ್ ಇಲಾಖೆಯು ಸೇರಿದಂತೆ ಇತರೆಲ್ಲಾ ಇಲಾಖೆಗಳು ಇದರಿಂದ ಹೊರತಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ವೃದ್ಧಾಪ್ಯ, ವಿಧವಾ, ಅಂಗವಿಕಲರ ಮತ್ತು ದೇವದಾಸಿ ಮುಂತಾದ ದುರ್ಬಲರಿಗೆ ನೀಡುವ ಮಾಸಿಕ ಪಿಂಚಣಿಗಳಲ್ಲೂ ಭ್ರಷ್ಟತೆಯು ಮುಖಕ್ಕೆ ರಾಚುತ್ತಿದೆ ಎಂದು ಆರೋಪಿಸಿದರು.

ಈ ಎಲ್ಲವೂ ದೇಶದ ಮುಂದೆ ರಾಜ್ಯವನ್ನು ತಲೆ ತಗ್ಗಿಸುವಂತೆ ಮಾಡಿವೆ. ಭ್ರಷ್ಟಾಚಾರದಲ್ಲಿ ರಾಜ್ಯವನ್ನು ಪ್ರಥಮ ಸ್ಥಾನಕ್ಕೆ ದೂಡಿವೆ. ಈ ಎಲ್ಲಾ ಅನುಚಿತ ಬೆಳವಣಿಗೆಗಳಿಗೆ ಕಾರಣವಾದ ರಾಜ್ಯ ಸರಕಾರದ ದುರ್ನಡೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಅವರು ಮಾರ್ಮಿಕವಾಗಿ ನುಡಿದ್ದಾರೆ.

ಈ ಎಲ್ಲದಕ್ಕೂ ತಮ್ಮದೇ ಸರಕಾರ ಮತ್ತು ಮಂತ್ರಿಮಂಡಲವೇ ನೇರ ಹೊಣೆಗಾರನಾಗಿರುವುದರಿಂದ ತಕ್ಷಣವೇ ರಾಜೀನಾಮೆ ನೀಡಿ ಜನರಿಂದ ಮರಳಿ ಆದೇಶ ಪಡೆಯಲು ಚುನಾವಣೆಗೆ ಮುಂದಾಗಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಮತ್ತೊಮ್ಮೆ ನಾವು ಬಲವಾಗಿ ಒತ್ತಾಯಿಸುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಮುಖಂಡರಾದ ಸಾತಿ ಸುಂದರೇಶ್, ಕೆ. ಉಮಾ, ಕ್ಲಿಫ್ಟನ್ ರೋಜಾರಿಯೋ, ಜಿ.ಆರ್. ಶಿವಶಂಕರ್, ಚಾಮರಸ ಮಾಲೀ ಪಾಟೀಲ, ಮೋಹನ್ ರಾಜ್ ಉಪಸ್ಥಿತರಿದ್ದರು.

Join Whatsapp