ಬೆಂಗಳೂರು, ಫೆ.6- ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ದೊಡ್ಡಬಳ್ಳಾಪುರ ಪೊಲೀಸರು 6 ಕೆಜಿ 838 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ರಾಕೇಶ್, ಬಿ.ಕೆ.ರಂಗನಾಥ, ಧನುಷ್ ಹಾಗೂ ಹೇಮಂತ್ ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಜ. 21ರಂದು ದೊಡ್ಡಬಳ್ಳಾಪುರದ ಮುತ್ಯಾಲಮ್ಮ ದೇವಸ್ಥಾನದ ಬಳಿ ಕೋವಿಡ್ ಮಾರ್ಗಸೂಚಿಗೆ ಸಂಬಂಧಿಸಿದಂತೆ ಮಾಸ್ಕ್ ಹಾಕದವರಿಗೆ ಪೊಲೀಸರು ದಂಡ ಹಾಕುತ್ತಿದ್ದರು.
ಈ ವೇಳೆ ಒಂದೇ ಬೈಕ್ನಲ್ಲಿ ಬರುತ್ತಿದ್ದ ಮೂವರು ಪೊಲೀಸರನ್ನು ನೋಡಿ ಬೈಕ್ ತಿರುಗಿಸಿಕೊಂಡು ವಾಪಸ್ ಹೋಗುತ್ತಿದ್ದರು.
ಸಂಶಯದ ಹಿನ್ನೆಲೆಯಲ್ಲಿ ಮೂವರನ್ನು ಕರೆದು ತಪಾಸಣೆ ನಡೆಸಿದಾಗ ಅವರ ಬ್ಯಾಗ್ನಲ್ಲಿ 6 ಕೆಜಿ 838 ಗ್ರಾಮ್ ಗಾಂಜಾ ಪತ್ತೆಯಾಗಿದ್ದು ರಾಕೇಶ್, ಬಿ.ಕೆ.ರಂಗನಾಥ ಮತ್ತು ಧನುಷ್ ಎಂಬುವರನ್ನು ಬಂಧಿಸಿ ವಿಚಾರಣೆ ಮಾಡಲಾಗಿತು.
ಈ ವೇಳೆ ಮಧುರೆ ದೇವಸ್ಥಾನ ಬಳಿ ಗಿರಾಕಿಯಿಂದ ಗಾಂಜಾ ಖರೀದಿಸಿ ದೊಡ್ಡಬಳ್ಳಾಪುರದಲ್ಲಿ ಮಾರಾಟ ಮಾಡಲು ಮುಂದಾಗಿದ್ದೆವು ಎಂದು ಆರೋಪಿಗಳು ಬಾಯ್ಬಿಟ್ಟಿದ್ದರು.
ಮೂವರು ಆರೋಪಿಗಳ ಮಾಹಿತಿ ಮೇರೆಗೆ ಆಂಧ್ರದಿಂದ ಗಾಂಜಾ ತಂದು ಕೊಡುತ್ತಿದ್ದ ಹೇಮಂತ್ನನ್ನ ದೊಡ್ಡಬಿದರಕಲ್ಲಿನ ಬಳಿ ಬಂಧಿಸಿ, ಆತನಿಂದ 6 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.