ಕೋಲ್ಕತ್ತಾದಲ್ಲಿ 3ನೇ T-20 ಪಂದ್ಯ: ಯುವ ಆಟಗಾರರಿಗೆ ಅವಕಾಶ ?

Prasthutha|

ಕೋಲ್ಕತ್ತಾ: ನ್ಯೂಜಿಲೆಂಡ್ ವಿರುದ್ಧದ 3 T-20 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಈಗಾಗಲೇ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಭಾನುವಾರ ಕ್ಲೀನ್’ಸ್ವೀಪ್ ಗುರಿಯೊಂದಿಗೆ ಮೈದಾನಕ್ಕಿಳಿಯಲಿದೆ.

- Advertisement -

ಜೈಪುರ ಹಾಗೂ ರಾಂಚಿಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬಳಿಕ ಕೋಲ್ಕತ್ತಾದ ಪ್ರಖ್ಯಾತ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಔಪಚಾರಿಕ ಪಂದ್ಯದಲ್ಲಿ ರೋಹಿತ್ ಟೀಮ್ ಕೆಲವೊಂದು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಸರಣಿ ಈಗಾಗಲೇ ಕೈವಶವಾಗಿರುವ ಹಿನ್ನೆಲೆಯಲ್ಲಿ ದ್ರಾವಿಡ್,  ತಮ್ಮ ಶೈಲಿಯಂತೆ ಯುವ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

- Advertisement -

ಕೆಎಲ್ ರಾಹುಲ್ ಬದಲು ಋತುರಾಜ್ ಗಾಯಕ್ವಾಡ್, ರಿಷಭ್ ಪಂತ್ ಬದಲು ಇಶಾನ್ ಕಿಶನ್, ಭುವನೇಶ್ವರ್ ಕುಮಾರ್ ಬದಲು ಆವೇಶ್ ಖಾನ್ ಹಾಗೂ ಆರ್.ಆಶ್ವಿನ್ ಬದಲು ಯಜುವೇಂದ್ರ ಚಾಹಲ್’ಗೆ ಅವಕಾಶ ನಿರೀಕ್ಷಿಸಲಾಗಿದೆ.  

 ಮತ್ತೊಂದೆಡೆ T-20 ವಿಶ್ವಕಪ್ ಫೈನಲ್ ಸೋಲಿನ ನಿರಾಸೆಯಲ್ಲಿಯೇ ಭಾರತಕ್ಕೆ ಬಂದಿಳಿದಿದ್ದ ಕಿವೀಸ್ ಇಲ್ಲೂ ಸೋಲಿನ ಸರಣಿಯನ್ನು ಮುಂದುವರಿಸಿದೆ.ಕ್ಲೀನ್ ಸ್ವೀಪ್ ತಪ್ಪಿಸಲು ಮೂರನೇ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಮೊದಲ ಪಂದ್ಯ ಸೋತ ಬಳಿಕ ಎರಡನೇ ಪಂದ್ಯದಲ್ಲಿ 3 ಬದಲಾವಣೆಗಳೊಂದಿಗೆ ಟಿಮ್ ಸೌಥಿ ತಂಡ ಕಣಕ್ಕಿಳಿದಿತ್ತು. ಆದರೆ ಫಲಿತಾಂಶವನ್ನು ಬದಲಿಸಲು ಸಾಧ್ಯವಾಗಿರಲಿಲ್ಲ. ಇಂದಿನ ಪಂದ್ಯವನ್ನು ಗೆದ್ದು ಗೌರವ ಉಳಿಸಿಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿರುವ ಪ್ರವಾಸಿಗರು ಯಾವ ತಂತ್ರವನ್ನು ಅನುಸರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸಂಜೆಯಾಗುತ್ತಲೇ ಇಬ್ಬನಿಯ ‘ಆಟ’ವೂ ಆರಂಭವಾಗುವುದರಿಂದ ಎಂದಿನಿಂತೆ ಟಾಸ್ ಪ್ರಮುಖ ಪಾತ್ರ ವಹಿಸಲಿದೆ. ಮೊದಲು ಬ್ಯಾಟ್ ಮಾಡುವ ತಂಡ ಬೃಹತ್ ಮೊತ್ತ ಗಳಿಸಬೇಕಾದ ಒತ್ತಡಕ್ಕೆ ಸಿಲುಕಲಿದೆ.



Join Whatsapp