ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತಕ್ಕೆ ಮಹಾರಾಷ್ಟ್ರದಲ್ಲಿ 36 ಮಂದಿ ಬಲಿ

Prasthutha|

ಮುಂಬೈ, ಜುಲೈ 23 : ಮಹಾರಾಷ್ಟ್ರದ ರಾಯ್ ಗಡ್ ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ ಕನಿಷ್ಠ 36 ಮಂದಿ ಸಾವನ್ನಪಿರುವ ಘಟನೆ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾದ ಪ್ರವಾಹಕ್ಕೆ ಸಾವಿರಾರು ಜನರು ಸಿಲುಕಿದ್ದಾರೆ. ಮಳೆಯಿಂದ ಭಾರೀ ಭೂ ಕುಸಿತ ಕೂಡ ಉಂಟಾಗಿದೆ. ಮುಂಬೈನಿಂದ 70 ಕಿ. ಮೀ ದೂರದಲ್ಲಿರುವ ರಾಯ್ ಗಡ್ ನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಹೆಲಿಕಾಪ್ಟರ್ ಗಳನ್ನು ಬಳಸಲಾಗುತ್ತಿದೆ.

- Advertisement -

ಹೆಲಿಕಾಪ್ಟರ್ ಮೂಲಕ ರಕ್ಷಣಾ ತಂಡಗಳು ಸಂತ್ರಸ್ತರನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಪ್ರವಾಹಕ್ಕೆ ಸಿಕ್ಕಿಹಾಕಿಕೊಂಡಿರುವವರು ಮೇಲ್ಛಾವಣಿ ಅಥವಾ ಎತ್ತರದ ಸ್ಥಳಕ್ಕೆ ಹೋಗಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕಳೆದ 40 ವರ್ಷಗಳಲ್ಲೇ ಈ ಜುಲೈ ತಿಂಗಳಲ್ಲೇ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದೆ. ನಿನ್ನೆ ಉಂಟಾದ ಮೂರು ಭೂಕುಸಿತಗಳಲ್ಲಿ ಒಂದು ಕಡೆ 32 ಶವಗಳು ಮತ್ತು ಇನ್ನೊಂದು ಸ್ಥಳದಲ್ಲಿ 4 ಶವಗಳು ಪತ್ತೆಯಾಗಿವೆ. ಮಹಾರಾಷ್ಟ್ರದ ಪರಿಸ್ಥಿತಿಯನ್ನು ಹೆಲಿಕಾಪ್ಟರ್ ಮೂಲಕ ವೀಕ್ಷಿಸಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇಂದು ಸ್ಥಳೀಯ ಅಧಿಕಾರಿಗಳೊಂದಿಗೆ ಈ ಕುರಿತು ಸಮಾಲೋಚನೆ ನಡೆಸಿ ಸೂಕ್ತ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಮುಂಬೈಯಿಂದ 250 ಕಿ.ಮೀ ದೂರದಲ್ಲಿರುವ ರತ್ನಗಿರಿ ಜಿಲ್ಲೆಯ ಕರಾವಳಿ ಪಟ್ಟಣವಾದ ಚಿಪ್ಲುನ್ ನ ಕೆಲವು ಭಾಗದಲ್ಲಿ 24 ಗಂಟೆಗಳಿಂದ ನಿರಂತರ ಮಳೆಯ ಕಾರಣದಿಂದ ವಶಿಷ್ಟ ನದಿ ಉಕ್ಕಿ ಹರಿದಿದ್ದರಿಂದ ನೀರಿನ ಮಟ್ಟವು 12 ಅಡಿಗಳಷ್ಟು ಏರಿಕೆಯಾಗಿದೆ ಮತ್ತು ರಸ್ತೆ ಮತ್ತು ಹಲವಾರು ಮನೆಗಳು ಮುಳುಗಿವೆ. ಪಟ್ಟಣದಲ್ಲಿನ ವಿದ್ಯುತ್ ಸರಬರಾಜು ಮತ್ತು ಟೆಲಿಪೋನ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಕೋವಿಡ್ ರೋಗಿಗಳಿಗೆ ಮೀಸಲಿರಿಸಿದ ಆಸ್ಪತ್ರೆಗಳು ಪ್ರವಾಹದ ನೀರಿನಿಂದ ಸುತ್ತುವರಿದ ಕಾರಣಕ್ಕಾಗಿ ಹಲವು ರೋಗಿಗಳನ್ನು ದೋಣಿಗಳ ಮೂಲಕ ರಕ್ಷಿಸಲಾಗಿದೆ.

- Advertisement -

ನೌಕಾಪಡೆಯ ಎರಡು ರಕ್ಷಣಾ ತಂಡ, ಸ್ಥಳೀಯ 12 ಪರಿಹಾರ ತಂಡ, ಕೋಸ್ಟ್ ಗಾರ್ಡ್ನಿಂದ ಎರಡು ತಂಡ ಮತ್ತು ಮೂರು ಮಂದಿಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು (ಎನ್.ಡಿ.ಆರ್.ಎಫ್) ಪ್ರವಾಹ ಭಾದಿತ ಪ್ರದೇಶಗಳಲ್ಲಿ ಜನರ ರಕ್ಷಣೆಗಾಗಿ ನಿಯೋಜಿಸಲಾಗಿದೆ. ನೌಕಾಪಡೆಯು ಏಳು ಪರಿಣಿತ ತಂಡಗಳನ್ನು ರಬ್ಬರ್ ದೋಣಿಗಳು, ಲೈಫ್ ಜಾಕೆಟ್ಗಳೊಂದಿಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ನಿಯೋಜಿಸಿದೆ. ಹೆಲಿಕಾಪ್ಟರ್ ಮೂಲಕ ಮರೂನ್ ಪ್ರದೇಶದ ಸಂತ್ರಸ್ತ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ನೌಕಾಪಡೆಯ ವಿಶೇಷ ತರಬೇತಿ ಪಡೆದ ಮುಳುಗು ತಜ್ಞರು ಪ್ರತಿ ತಂಡದೊಂದಿಗೆ ಡೈವಿಂಗ್ ಸಲಕರಣೆಗಳೊಂದಿಗೆ ಕಾರ್ಯಪ್ರವೃತ್ತರಾಗಿದ್ದಾರೆ.

Join Whatsapp