ಬೆಳಗಾವಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಹಾಲಿ ಶಾಸಕ ಹೆಚ್ಡಿ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 300-400 ಹೆಣ್ಣು ಮಕ್ಕಳ ಮೇಲೆ ವಿಕೃತಿಯನ್ನು ಮೆರೆದಿದ್ದಾರೆ. 16 ವರ್ಷದಿಂದ 50 ವರ್ಷದ ವರೆಗೆ ಮಹಿಳೆಯರಿದ್ದಾರೆ. ಇದರಲ್ಲಿ ಮನೆ ಕೆಲಸದವರು ಸೇರಿದಂತೆ ಪೊಲೀಸ್ ಅಧಿಕಾರಿಗಳು ಇದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್ಡಿ ರೇವಣ್ಣ ಅವರು ಮುಖ್ಯ ಆರೋಪಿ, ಪ್ರಜ್ವಲ್ ರೇವಣ್ಣ ಎರಡನೇ ಆರೋಪಿ. ನನಗೆ ವಿದೇಶದಿಂದ ಪೋನ್ ಕರೆಗಳು ಬರುತ್ತಿವೆ. ಇಷ್ಟೆಲ್ಲ ನಡೆಯುತ್ತಿದ್ದರೂ ಬಿಜೆಪಿ ನಾಯಕರು ಇದರ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ್ಲ ಹುಬ್ಬಳ್ಳಿಯ ಘಟನೆ ಬಗ್ಗೆ ಎಲ್ಲ ಜಿಲ್ಲೆಗಳಲ್ಲಿ ಧರಣಿ ಮಾಡಿದರು. ಧೀಮಂತ ಬಿಜೆಪಿ ನಾಯಕರಿಗೆ ಈ ಹೆಣ್ಣು ಮಕ್ಕಳು ಕಾಣಿಸುತ್ತಿಲ್ಲವಾ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.
ಇವರ ಜಾಣ ಕುರುಡು ಪ್ರಕರಣ ಮುಚ್ಚಿ ಹಾಕಲು ಹೊರಟಿದೆ. ವಿಪಕ್ಷ ನಾಯಕ ಆರ್.ಅಶೋಕ್ ಜೆಡಿಎಸ್ನವರನ್ನ ಕೇಳಿ ಅಂತಾರೆ. ಈ ವಿಚಾರದಲ್ಲಿ ನಿಮ್ಮ ನಿಲುವೇನು? ರಾಜ್ಯದಲ್ಲಿ ನಡೆದ 2-3 ಘಟನೆ ಬಗ್ಗೆ ಮೋದಿ ಉಲ್ಲೇಖ ಮಾಡುತ್ತಾರೆ. ಪ್ರಧಾನಿ ಮೋದಿ ಈ ಪ್ರಕರಣದ ಬಗ್ಗೆ ಯಾಕೆ ಮಾತಾಡಲಿಲ್ಲ? ಪಕ್ಕದಲ್ಲೇ ಆ ಸಂಸದರನ್ನು ಕೂರಿಸಿಕೊಳ್ಳತ್ತೀರಿ. ಬೇಟಿ ಬಚಾಚೋ, ಬೇಟಿ ಪಡಾವೋ ಬರೀ ಘೋಷಣೆ ಅಷ್ಟೇನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.