►ದೇವಸ್ಥಾನಗಳ ಹಸ್ತಾಂತರ , ಮತಾಂತರ, ವಕ್ಫ್ ಮಸೂದೆ ಕುರಿತು ಚರ್ಚೆ
ನವದೆಹಲಿ: ವಿಶ್ವ ಹಿಂದೂ ಪರಿಷತ್ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಹಲವಾರು ಹೈಕೋರ್ಟ್ ಗಳ ಸುಮಾರು 30 ನಿವೃತ್ತ ನ್ಯಾಯಾಧೀಶರು ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ.
ವಾರಣಾಸಿ ಮತ್ತು ಮಥುರಾ ದೇವಾಲಯಗಳ ಕಾನೂನು ವಿವಾದ, ವಕ್ಫ್ (ತಿದ್ದುಪಡಿ) ಮಸೂದೆ ಮತ್ತು ಧಾರ್ಮಿಕ ಮತಾಂತರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಕೂಡ ಉಪಸ್ಥಿತರಿದ್ದರು.
ಸಭೆಯ ಕುರಿತು ಮಾತನಾಡಿದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಲೋಕ್ ಕುಮಾರ್, ಸಮಾಜದ ಮುಂದಿರುವ ಸಾಮೂಹಿಕ ಸಮಸ್ಯೆಗಳಾದ ವಕ್ಫ್ ತಿದ್ದುಪಡಿ ಮಸೂದೆ, ದೇವಸ್ಥಾನಗಳ ಹಸ್ತಾಂತರ, ಸರ್ಕಾರದ ನಿಯಂತ್ರಣದಲ್ಲಿರುವ ದೇವಸ್ಥಾನಗಳನ್ನು ಹಸ್ತಾಂತರಿಸುವುದು, ಮತಾಂತರ ಇತ್ಯಾದಿ ವಿಷಯಗಳು ಚರ್ಚೆಗೆ ಬಂದವು ಎಂದು ಹೇಳಿದ್ದಾರೆ.
ರಾಷ್ಟ್ರೀಯತೆ ಮತ್ತು ಹಿಂದುತ್ವ ಕುರಿತು ಚರ್ಚೆಗಳು ನಡೆದವು. ಹಿಂದೂಗಳ ಮೇಲೆ ಪರಿಣಾಮ ಬೀರುವ ಕಾನೂನುಗಳು ಮತ್ತು ಗೋಹತ್ಯೆ ಇತರ ವಿಷಯಗಳು ಚರ್ಚೆಗೆ ಬಂದವು ಎಂದು ಸಂಘಟನೆಯ ವಕ್ತಾರ ವಿನೋದ್ ಬನ್ಸಾಲ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಅಯೋಧ್ಯೆಯ ಬಾಬರಿ ಮಸೀದಿ ಮತ್ತು ವಾರಣಾಸಿಯ ಜ್ಞಾನವಾಪಿ ಮಸೀದಿಗಳ ಮೇಲೆ ಹಿಂದುತ್ವವಾದಿಗಳು ಹಕ್ಕುಗಳನ್ನು ಮಂಡಿಸುವಲ್ಲಿ ನ್ಯಾಯಾಲಯದ ಆದೇಶಗಳು ಪ್ರಮುಖ ಪಾತ್ರವಹಿಸಿವೆ. ವಿಶ್ವ ಹಿಂದೂ ಪರಿಷತ್ ಸದಸ್ಯರು ಇಂತಹ ಹಲವಾರು ಪ್ರಕರಣಗಳಲ್ಲಿ ದಾವೆ ಹೂಡಿದ್ದಾರೆ ಎನ್ನುವುದು ಇಲ್ಲಿ ಗಮನಾರ್ಹ ಎಂದು scroll.in ಹೇಳಿದೆ.