ಬಾಗಲಕೋಟೆ: ರಾಜ್ಯದಲ್ಲಿ ಭ್ರಷ್ಟಾಚಾರ ಯಾವ ಹಂತಕ್ಕೆ ಬಂದು ತಲುಪಿದೆ ಎಂದರೆ ಮಠಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನ ಪಡೆಯಲು ಶೇಕಡಾ 30ರಷ್ಟು ಕಮಿಷನ್ ನೀಡಬೇಕಾಗಿದೆ ಎಂದು ಶಿರಹಟ್ಟಿ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀಳಗಿ ತಾಲ್ಲೂಕಿನ ಬಾಡಗಂಡಿಯಲ್ಲಿ ಕೃಷ್ಣಾಮಹಾದಾಯಿನವಲಿ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಠಗಳಿಗೆ ಬಿಡುಗಡೆಯಾದ ಅನುದಾನದಲ್ಲಿ ಪರ್ಸೆಂಟೇಜ್ ಕಡಿತವಾದ ನಂತರವೇ ಕಟ್ಟಡದ ಕೆಲಸ ಆರಂಭವಾಗುತ್ತದೆ. ಇಂತಿಷ್ಟು ಮೊತ್ತ ಕಡಿತ ಮಾಡದಿದ್ದರೆ ನಿಮ್ಮ ಕೆಲಸವಂತೂ ಆಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆಎಂದು ಬೇಸರ ವ್ಯಕ್ತಪಡಿಸಿದರು.
‘ಈಗಂತೂ ನಾಡಿನಲ್ಲಿ ಬುದ್ಧಿಗೇಡಿ ಸರ್ಕಾರಗಳು ಬರುತ್ತಿವೆ. ಕಾಂಕ್ರೀಟ್ ರಸ್ತೆ ಮೆಷಿನ್ ನಿಂದ ಒಡೆಸಿ ಪೈಪ್ ಲೈನ್ ಹಾಕಿ ನಳ್ಳಿಯ ಮೂಲಕ ನೀರು ಕೊಡುವ ಬದಲಿಗೆ ರೈತನ ಹೊಲಗಳಿಗೆ ನೀರು ಕೊಡಿ. ಉತ್ತರ ಭಾರತದಲ್ಲಿ ಒಂದು ವರ್ಷ ಕಾಲ ಸಾವು–ನೋವಿಗೂ ಅಂಜದೇ ರೈತರು ನಡೆಸಿದ ಹೋರಾಟದ ಮಾದರಿಯ ಪ್ರತಿರೋಧಕ್ಕೆ ಇಲ್ಲಿಯ ರೈತರು ಸಿದ್ಧರಾದರೆ ಮಾತ್ರ ನಿಮಗೆ ಅನ್ನಸಿಕ್ಕೀತು. ನೀವು ಬಹಳ ಜಾಗರೂಕರಾಗಬೇಕು’ ಎಂದು ಕಿವಿಮಾತು ಹೇಳಿದರು.