ರಾಜ್ಯದ ಪ್ರತಿ ಶಾಸಕರ ಕ್ಷೇತ್ರಕ್ಕೆ 3 ಕೆಪಿಎಸ್ ಶಾಲೆ: ಮಧು ಬಂಗಾರಪ್ಪ

Prasthutha|

ಚಿಕ್ಕಮಗಳೂರು: ರಾಜ್ಯದ ಪ್ರತಿ ಶಾಸಕರ ಕ್ಷೇತ್ರಕ್ಕೆ ತಲಾ 3 ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಗಳನ್ನು ಮಂಜೂರು ಮಾಡಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

- Advertisement -

ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಗುಂಪು ಆಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಿಯಾಗಿ ಓದಿ ಉತ್ತೀರ್ಣರಾಗಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕೆಪಿಎಸ್ ಶಾಲೆಗಳನ್ನು ತೆರೆಯುವುದರಿಂದ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚುತ್ತದೆ. ಜೊತೆಗೆ ಶಿಕ್ಷಕರ ಕೊರತೆ ನೀಗುತ್ತದೆ ಎಂದು ತಿಳಿಸಿದರು.

ಒಂದೇ ವರ್ಷದಲ್ಲಿ 3 ಬಾರಿ ಬೋರ್ಡ್ ಎಕ್ಸಾಮ್ ನಡೆಸಿದ್ದರಿಂದಾಗಿ ಫೇಲಾದ ವಿದ್ಯಾರ್ಥಿಗಳಿಗೆ 1 ವರ್ಷ ವೇಸ್ಟ್ ಆಗುವುದು ತಪ್ಪಿತು. ರಾಜ್ಯದ 42,000 ವಿದ್ಯಾರ್ಥಿಗಳಿಗೆ ಆ ವರ್ಷದಲ್ಲೇ ಮತ್ತೆ ಪರೀಕ್ಷೆ ಎದುರಿಸಿ ಪಾಸ್ ಆಗಲು ಸಾಧ್ಯವಾಯಿತು. ಒಂದೇ ವರ್ಷದಲ್ಲಿ 3 ಬಾರಿ ಬೋರ್ಡ್ ಎಕ್ಸಾಮ್ ನಡೆಸಿರುವುದು ದೇಶದ ಇತಿಹಾಸದಲ್ಲಿ ಇದೇ ಪ್ರಥಮವಾಗಿದೆ ಎಂದು ತಿಳಿಸಿದರು.

- Advertisement -

ಈ ಪರೀಕ್ಷೆಗಳಲ್ಲಿ ರಾಜ್ಯದ 1,20,000 ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆದಿದ್ದು, ಅದರಲ್ಲಿ 42,000 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಆ ಎಲ್ಲಾ ವಿದ್ಯಾರ್ಥಿಗಳು ಇದೇ ವರ್ಷ ಕಾಲೇಜಿಗೆ ದಾಖಲಾಗುತ್ತಾರೆ. ಮುಂದಿನ ವರ್ಷ 10ನೇ ತರಗತಿಯಲ್ಲೂ ವರ್ಷದಲ್ಲಿ 3 ಬಾರಿ ಬೋರ್ಡ್ ಎಕ್ಸಾಮ್ ನಡೆಸಲಾಗುವುದು ಎಂದರು.

ಈ ಹಿಂದೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಾರದಲ್ಲಿ 1 ಮೊಟ್ಟೆ ನೀಡಲಾಗುತ್ತಿತ್ತು. ನಾವು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಕ್ಕಳ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಈಗ 2 ಮೊಟ್ಟೆ ನೀಡುವ ಕೆಲಸ ಆರಂಭಿಸಿದ್ದೇವೆ. ಶಿಕ್ಷಣ ಇಲಾಖೆ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಎಲ್ಲವನ್ನೂ ಬಗೆಹರಿಸಲು ಸಾಧ್ಯವಾಗದಿದ್ದರೂ ಕೆಲವನ್ನಾದರೂ ಖಂಡಿತ ಪರಿಹರಿಸಲಾಗುವುದು ಎಂದಿದ್ದಾರೆ.

Join Whatsapp