3 ಹತ್ಯೆಗಳು ಬೊಮ್ಮಾಯಿ ಸರ್ಕಾರದ ವೈಫಲ್ಯವನ್ನು ಬಹಿರಂಗಪಡಿಸಿದೆ: ಬಹುತ್ವ ಕರ್ನಾಟಕ ಆರೋಪ

Prasthutha|

ಬೆಂಗಳೂರು: ದ.ಕ. ಜಿಲ್ಲೆಯಲ್ಲಿ ನಡೆದಿರುವ ಮಸೂದ್, ಪ್ರವೀಣ್ ನೆಟ್ಟಾರು ಮತ್ತು ಮುಹಮ್ಮದ್ ಫಾಝಿಲ್ ಅವರ ಹತ್ಯೆಗಳು ಬಸವರಾಜ್ ಬೊಮ್ಮಾಯಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆಯ ವಿಫಲತೆಯನ್ನು ತೋರಿಸುತ್ತದೆ ಎಂದು ಬಹುತ್ವ ಕರ್ನಾಟಕ ಸಂಘಟನೆ ಆರೋಪಿಸಿದೆ.

- Advertisement -

ಇಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ವಕೀಲರಾದ ಬಿ.ಟಿ. ವೆಂಕಟೇಶ್, ಬೊಮ್ಮಾಯಿ ಆಡಳಿತ ಮುಂದುವರಿದರೆ ಕರ್ನಾಟಕದ ಯುವ ಸಮೂಹದ ಭವಿಷ್ಯ ಅಪಾಯಕ್ಕೀಡಾಗುತ್ತದೆ. ಯುಪಿ ಮಾದರಿ ಹಾಗೂ ಎನ್ಕೌಂಟರ್ ಕರೆ ನೀಡುವುದು ಪೊಲೀಸರಿಗೆ, ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಹಾಗೂ ಅವರ ಆಡಳಿತವು ಈ ಮೂರು ಕೊಲೆಗಳ ನಂತರ ನಡೆದುಕೊಂಡ ರೀತಿ ಸಂವಿಧಾನದ ಅನುಚ್ಛೇದ 14ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದರು.

- Advertisement -

ಕರ್ನಾಟಕ ಇಂದು ಬಿಕ್ಕಟ್ಟಿನಲ್ಲಿದ್ದು, ಇದೊಂದು ಮಾನವ ನಿರ್ಮಿತವಾಗಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಂತ್ರಿಮಂಡಲದ ಸದಸ್ಯರೇ ನೇರ ಹೊಣೆಯಾಗಿದ್ದಾರೆ. ಪ್ರಪಂಚದಾದ್ಯಂತ ಮಾನವ ನಾಗರಿಕತೆಗಳು ಸಮಾಜದಲ್ಲಿ ಯಾವುದೇ ಗೊಂದಲ ಹಾಗೂ ಅವ್ಯವಸ್ಥೆ ಉಂಟಾಗದಂತೆ ತಡೆಯಲು ಹಾಗೂ ಕೆಲವೇ ಜನರು ಕಾನೂನು ಕೈಗೆತ್ತಿಕೊಳ್ಳುವುದನ್ನು ತಪ್ಪಿಸಲು ಕಾನೂನಿನ ನಿಯಮವನ್ನು ಅಳವಡಿಸಿಕೊಂಡವು ಎಂದು ತಿಳಿಸಿದ್ದಾರೆ.

ಇಂದು ಕರ್ನಾಟಕದಲ್ಲಿ ಈ ಕಾನೂನಿಯ ನಿಯಮ ಎನ್ನುವುದು ಸಂಪೂರ್ಣವಾಗಿ ಕುಸಿದಿದೆ. ಆಡಳಿತ ಎನ್ನುವುದು ಕೇವಲ ಒಂದು ಪಕ್ಷದ ಕಾರ್ಯಕರ್ತರಿಗೆ ಮಾತ್ರವೇ ಎಂಬಂತೆ ಉಳಿದಿದೆ. ಈ ನಾಡಿನ ಮುಖ್ಯಮಂತ್ರಿ ಕೊಲೆಯಾದ ತನ್ನ ಪಕ್ಷದ ಕಾರ್ಯಕರ್ತನ ಮನೆಗೆ ಮಾತ್ರ ಭೇಟಿಕೊಟ್ಟು, ಕೋಮುದ್ವೇಷದ ಕಾರಣಕ್ಕೆ ಕೊಲೆಯಾದ ಇತರರನ್ನು ನಿರ್ಲಕ್ಷ ಮಾಡುತ್ತಾರೆ. ಇಲ್ಲಿ ಮೇಲ್ನೋಟಕ್ಕಾದರೂ ಸಮಾನತೆಯನ್ನು ಸೂಚಿಸುವ ವ್ಯವಧಾನವಿಲ್ಲ. ಇದಕ್ಕಿಂತಲೂ ಕೆಟ್ಟ ಸಂಗತಿಯೆಂದರೆ ಒಬ್ಬ ಮುಖ್ಯಮಂತ್ರಿ ಹಿಂದುತ್ವದ ಕಾನೂನನ್ನು ಪಾಲಿಸುತ್ತೇನೆ ಎಂದು ಹೇಳುವುದು ದುರಂತ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಹುತ್ವದ ಸರ್ಕಾರದ ಬೇಡಿಕೆಗಳು ಇಂತಿವೆ:

1) ಕೋಮು ದ್ವೇಷ, ಗಲಭೆಗಳು, ಗುಂಪು ಹಿಂಸೆಗೆ ಸಂಬಂಧಪಟ್ಟಂತೆ ಸರ್ಕಾರದ ಸಾಂವಿಧಾನಿಕ ಕರ್ತವ್ಯಗಳೇನು ಎಂದು ನ್ಯಾಯಾಲಯ ವಿವರಿಸಿದೆ ಹಾಗೂ ಕೇಂದ್ರ ಸರ್ಕಾರ ಗೈಡ್’ಲೈನ್ ಆಫ್ ಕಮ್ಯೂನಲ್ ಹಾರ್ಮನಿ 2008 ನಲ್ಲಿ ಸ್ಪಷ್ಟವಾಗಿ ತಿಳಿಸಿದೆ.ಇದನ್ನು ಪದೇ ಪದೇ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೆ ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ. ಈ ಕೂಡಲೇ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು.
2) ನಡೆದಿರುವ ಈ ಕೊಲೆಗಳಿಗಾಗಿ ಮುಖ್ಯಮಂತ್ರಿಗಳು ಈ ರಾಜ್ಯದ ಕ್ಷಮೆಯನ್ನು ಯಾಚಿಸಬೇಕು. ಯುಪಿ ಮಾಡೆಲ್ ಅನುಸರಿಸುತ್ತೇನೆ ಎಂಬ ಅವರ ಹೇಳಿಕೆಯನ್ನು ಹಿಂಪಡೆದು ಅದಕ್ಕೆ ಕ್ಷಮೆ ಕೇಳಬೇಕು.
3) ಹಿಂಸೆಯನ್ನು ತಡೆಯಲು ಕಾನೂನು ಬಾಹಿರ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ ಸಚಿವ ಡಾ. ಅಶ್ವತ್ಥ ನಾರಾಯಣ್ ಅವರ ಮೇಲೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು.
4) ದ್ವೇಷ ಹಬ್ಬಿಸುವವರಾದ ಪ್ರಮೋದ್ ಮುತಾಲಿಕ್, ಕೋಳಿ ಸ್ವಾಮಿ, ಈಶ್ವರಪ್ಪ ಮತ್ತು ಇತರರ ಮೇಲೆ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕು.
5) ಗಾಳಿಸುದ್ದಿ ಮತ್ತು ದ್ವೇಷ ಹರಡುವ ಮಾಧ್ಯಮಗಳ ಮೇಲೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು.
6) ಮುಖ್ಯಮಂತ್ರಿಗಳು ಫಾಝಿಲ್, ಮಸೂದ್, ಶಹಬಾಝ್ ಮತ್ತು ಸಮೀರ್ ಅವರ ಮನೆಗಳಿಗೀ ಭೇಟಿ ನೀಡಿ, ಅವರಿಗೆ ಪರಿಹಾರವನ್ನು ಘೋಷಿಸಬೇಕು.
7) ಶಿಕ್ಷಣ ಮತ್ತು ಉದ್ಯೋಗ ಸೃಷ್ಟಿಯ ಕುರಿತಂತೆ ಆಡಳಿತವು ಯುವಕರ ಜೊತೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂಬ ಬೇಡಿಕೆಗಳನ್ನು ಸರ್ಕಾರ ಮುಂದಿಟ್ಟಿದೆ.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವಕೀಲರಾದ ಬಿ.ಟಿ. ವೆಂಕಟೇಶ್, ಅಡ್ವಕೇಟ್ ಮೈತ್ರಿ, ಎಪಿಸಿಆರ್ ನ ನಿಯಾಝ್, ಸ್ಲಂ ಮಹಿಳಾ ಸಂಘಟನೆಯ ಶರಣ್ಯ, ಎಸ್.ಐ.ಒ ಮುಖಂಡ ನಾಸೀರ್ ಎಂಬವರು ಉಪಸ್ಥಿತರಿದ್ದರು.

Join Whatsapp