ನೂತನ ಶಾಸಕರಿಗೆ 3ದಿನ ತರಬೇತಿ ಶಿಬಿರ: ಯು.ಟಿ.ಖಾದರ್‌

Prasthutha|

ಬೆಂಗಳೂರು : 16ನೇ ವಿಧಾನಸಭೆಗೆ ಮೊದಲ ಬಾರಿಗೆ ನೂತನವಾಗಿ ಆಯ್ಕೆಯಾದ 70 ಶಾಸಕರಿಗೆ 3 ದಿನಗಳ ಕಾಲ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಜೂ.26ರಿಂದ ಜೂ.28ರವರೆಗೆ ಮೂರು ದಿನಗಳ ಕಾಲ ನಡೆಯುವ ತರಬೇತಿ ಶಿಬಿರದಲ್ಲಿ ಈ ನೂತನ ಶಾಸಕರಿಗೆ ಆರೋಗ್ಯ ಸುಸ್ಥಿರತೆ ಮತ್ತು ಜ್ಞಾನಾಭಿವೃದ್ಧಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ತಿಳಿಸಿದರು.

- Advertisement -

ವಿಧಾನಸೌಧದದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಯುವ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಸದೀಯ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಉದ್ದೇಶದಿಂದ ಮತ್ತು ಯುವಜನರ ಆಲೋಚನೆಗಳು,ದೂರದೃಷ್ಟಿ,ಪ್ರತಿಭೆ ಬಿಂಬಿಸಲು ನಮ್ಮ ಸಚಿವಾಲಯದ ಮುಖಾಂತರ 03ದಿವಸಗಳ ಕಾಲ ಪ್ರಕೃತಿ ಮತ್ತು ತರಬೇತಿ ಶಿಬಿರವನ್ನು ನೆಲಮಂಗಲದ ಸಮೀಪದ ಧರ್ಮಸ್ಥಳ ಕ್ಷೇಮವನದಲ್ಲಿ ನಡೆಸಲಾಗುತ್ತದೆ. ಈಗಾಗಲೇ ಮೊದಲ ಬಾರಿಗೆ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಮಾಹಿತಿ ನೀಡಲಾಗಿದ್ದು,ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಸಕ್ರಿಯವಾಗಿ ಈ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಮೂಲಕ ಈ ತರಬೇತಿ ಶಿಬಿರವನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಮನವಿ ಮಾಡಿದರು.

- Advertisement -

ಜೂ.25 ರಂದು ಸಂಜೆ ಕ್ಷೇಮವನದಲ್ಲಿ ನೂತನ ಶಾಸಕರು ಆಗಮಿಸಿ ನೋಂದಣಿ ಮಾಡಿಕೊಳ್ಳಲಿದ್ದಾರೆ. ಜೂ.26ರಿಂದ ಮೂರು ದಿನಗಳ ಕಾಲ ಬೆಳಗ್ಗೆ 6ರಿಂದ ಬೆಳಗ್ಗೆ 9ರವರೆಗೆ ಆರೋಗ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳು (ಕಾರ್ಯಕ್ರಮಗಳು) ನಡೆಯಲಿವೆ ಎಂದರು. ಬೆಳಗ್ಗೆ 10ರಿಂದ ಸಂಜೆಯವರೆಗೆ ಹಿರಿಯ ಸದಸ್ಯರು ಶಿಬಿರದಲ್ಲಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದರು.

ಜೂ.26ರಂದು ಮಧ್ಯಾಹ್ನ 12ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ‌ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು , ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್ ಅವರು ಪಾಲ್ಗೊಳ್ಳಲಿದ್ದಾರೆ. ಮೂರು ದಿನಗಳ ಕಾಲ ಪ್ರತಿದಿನ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಹೆಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ನೂತನ ಶಾಸಕರ ಜೊತೆಗೆ ಸಂವಾದ ಏರ್ಪಡಿಸಲಾಗಿದೆ.

ಶಾಸಕರ ಹಕ್ಕುಗಳು ಮತ್ತು ಕರ್ತವ್ಯಗಳು,ಶಾಸನಗಳ ರಚನೆ ಮತ್ತು ಸದಸ್ಯರ ಭಾಗವಹಿಸುವಿಕೆ, ಶೂನ್ಯವೇಳೆ, ಪ್ರಶ್ನೋತ್ತರ, ಜನಮೆಚ್ಚಿಸುವ ಶಾಸಕನಾಗುವುದು ಹೇಗೆ, ವಿಧಾನಮಂಡಲದ ಸಮಿತಿಗಳು ಮತ್ತು ಸದಸ್ಯರ ಭಾಗವಹಿಸುವಿಕೆ ಸೇರಿದಂತೆ ವಿಧಾನಮಂಡಲದ ಕಾರ್ಯಕಲಾಪಗಳು ಮತ್ತು ಶಾಸಕರ ಜವಾಬ್ದಾರಿಗಳ ಕುರಿತು ಹಿರಿಯ ಸದಸ್ಯರು ತರಬೇತಿ ಶಿಬಿರದಲ್ಲಿ ತಮ್ಮ ಅನುಭವಗಳನ್ನ ಹಂಚಿಕೊಳ್ಳಲಿದ್ದಾರೆ. ಒಟ್ಟಾರೆಯಾಗಿ ಗುಣಮಟ್ಟದ ಅಧಿವೇಶನ ಮತ್ತು ಸದ್ಭಳಕೆ ಕುರಿತು ಶಾಸಕರಲ್ಲಿ ಜಾಗೃತಿ ಮೂಡಿಸುವುದು ಈ ತರಬೇತಿಯ ಮುಖ್ಯ ಉದ್ದೇಶವಾಗಿದೆ ಎಂದರು.

ಆರೋಗ್ಯ, ದೈಹಿಕ, ಮಾನಸಿಕ ಸದೃಢತೆ ಜೊತೆಗೆ ಅತ್ಯಂತ ಆತ್ಮವಿಶ್ವಾಸದಿಂದ ಸದನದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಸದಸ್ಯರಿಗೆ ಅಗತ್ಯ ತರಬೇತಿ ನೀಡಲಾಗುತ್ತದೆ.

ಜು.03ರಿಂದ ಅಧಿವೇಶನ ಆರಂಭ:

16ನೇ ವಿಧಾನಸಭೆಯ ೦1ನೇ ಅಧಿವೇಶನದ ಮುಂದುವರಿದ ಉಪವೇಶನ ಇದೇ ಜು.3ರಿಂದ ಆರಂಭವಾಗಲಿದ್ದು,ಜು.14ರವರೆಗೆ 10ದಿನಗಳ ಕಾಲ ನಡೆಯಲಿದೆ. ಜು.03ರಂದು ಮಧ್ಯಾಹ್ನ 12ಕ್ಕೆ ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಅಧಿವೇಶನದಲ್ಲಿ ಮುಖ್ಯವಾಗಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆ ನಡೆದು ತದನಂತರ ನಿರ್ಣಯ ಅಂಗೀಕಾರವಾಗಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.07ರಂದು 2023-24ನೇ ಸಾಲಿನ ಆಯವ್ಯಯ ಮಂಡಿಸಲಿದ್ದು, ಆಯವ್ಯಯದ ಮೇಲೆ ಸಾಮಾನ್ಯ ಚರ್ಚೆ ನಡೆದ ನಂತರ ಅನುದಾನದ ಬೇಡಿಕೆಗಳನ್ನ ಅಂಗೀಕರಿಸಲಾಗುತ್ತದೆ.

ಈ ಅಧಿವೇಶನದಲ್ಲಿ ಸರಕಾರದಿಂದ ಸ್ವೀಕರಿಸಲಾದ ವಿಧೇಯಕಗಳನ್ನು ಪರ್ಯಾಲೋಚನೆಗೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು. ಒಟ್ಟು 08 ದಿನಗಳ ಕಾಲ ಪ್ರಶ್ನೋತ್ತರ ಕಲಾಪ ನಿಗದಿಪಡಿಸಲಾಗಿದೆ. ಇದರ ಜೊತೆಗೆ ಗಮನಸೆಳೆಯುವ ಸೂಚನೆಗಳು,ಶೂನ್ಯವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆಗಳು, ಖಾಸಗಿ ಸದಸ್ಯರುಗಳು ಕಾರ್ಯಕಲಾಪಗಳನ್ನು ನಡೆಸಲಾಗುವುದು ಎಂದು ಸ್ಪೀಕರ್‌ ಯು.ಟಿ.ಖಾದರ್‌ ಅವರು ವಿವರಿಸಿದರು.

ಈ ಸಂದರ್ಭದಲ್ಲಿ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಇದ್ದರು.



Join Whatsapp