ಸುಳ್ಳು ಆರೋಪದ ವಿರುದ್ಧ 3 ಕೋಟಿ ಮಾನನಷ್ಟ ಕೇಸ್: ರವಿ ಚನ್ನಣ್ಣನವರ್

Prasthutha|

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದವರ ವಿರುದ್ಧ 3 ಕೋಟಿ ರೂಗಳ  ಮಾನನಷ್ಟ ಪ್ರಕರಣ ದಾಖಲಿಸುವೆ ಎಂದು ಸಿಐಡಿ ಎಸ್ ಪಿ ರವಿ ಡಿ. ಚನ್ನಣ್ಣನವರ್ ಎಚ್ಚರಿಸಿದ್ದಾರೆ.

- Advertisement -

ಆಸ್ತಿಗಳಿಕೆ ಸಂಬಂಧಿಸಿದಂತೆ ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಚನ್ನಣ್ಣನವರ್ ಅವರು ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿ ಕಾನೂನು ಕ್ರಮ ಕೈಗೊಳ್ಳುವೆ ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವ್ಯಕ್ತಿಗಳು ನನ್ನ ಹಾಗೂ ನನ್ನ ಕುಟುಂಬದ ಮೇಲೆ ಆಧಾರರಹಿತ ಆರೋಪ ಮಾಡಿದ್ದು ಇವೆಲ್ಲವೂ ಸುಳ್ಳಾಗಿದ್ದು, ದುರುದ್ದೇಶದಿಂದ ಕೂಡಿರುತ್ತವೆ.

- Advertisement -

ಸಾಮಾಜಿಕ ಜಾಲತಾಣದಲ್ಲಿ, ನನ್ನ ತಂದೆ-ತಾಯಿಯವರ ಹೆಸರಲ್ಲಿರುವ ಕೆಲ ಪಹಣಿ ಹಾಕಿ, ಆರೋಪಿಸಿದ್ದು, ಅವುಗಳನ್ನೆಲ್ಲಾ ಕಾನೂನು ಬದ್ಧವಾಗಿಯೇ ನಾನು ಖರೀದಿಸಿದ್ದೇನೆ. ಇವುಗಳು ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಗಳಾಗಿವೆ. ಅವುಗಳನ್ನೆಲ್ಲ ಆಯಾ ವರ್ಷವೇ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ.

ಇವುಗಳನ್ನು ನಾನು ಭ್ರಷ್ಟ ರೀತಿಯಿಂದ ಸಂಪಾದಿಸಿದ್ದೇನೆ ಎಂದು ಸುಳ್ಳು ಸುದ್ದಿಗಳನ್ನು ಹರಡಿ ನನ್ನನ್ನು ತೇಜೋವಧೆ ಮಾಡಬೇಕೆಂದೇ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸುತ್ತಿದ್ದು, ನಾನೊಬ್ಬ ಅಖಿಲ ಭಾರತೀಯ ಸೇವಕನಾಗಿದ್ದು, ಸೇವಾ ನಿಯಮಗಳ ಅಡಿ ವರ್ತಿಸಬೇಕಾದ್ದು ನನ್ನ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.

ಆದ್ದರಿಂದ ಈ ಕುರಿತು ನಾನು ಇದಾವುದಕ್ಕೂ ನಾನು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸದೇ ಕಾನೂನುಬದ್ಧವಾಗಿ ಕ್ರಮ ಕೈಗೊಂಡಿರುತ್ತೇನೆ ಎಂದಿದ್ದಾರೆ.

ಈಗಾಗಲೇ ಕಾನೂನಾತ್ಮಕವಾಗಿ ನಮ್ಮ ನ್ಯಾಯವಾದಿಗಳ ಮೂಲಕ ಲೀಗಲ್ ನೋಟಿಸ್ ನೀಡಿರುತ್ತೇನೆ. ಇದಕ್ಕೆ ಉತ್ತರ ಬಂದಿರುವುದಿಲ್ಲ ಈ ಕುರಿತು ಸಂಬಂಧಪಟ್ಟ ನ್ಯಾಯಾಲಯದಲ್ಲಿ 3 ಕೋಟಿ ರೂ. ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಿದ್ದೇನೆ. ಹಾಗೆಯೇ ಸುಳ್ಳು ಆಪಾದನೆ ಮಾಡಿದ್ದಕ್ಕೆ, ಎರಡು ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಕೇಸ್ ಹೂಡಲಿದ್ದೇನೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಮಾಧ್ಯಮಗಳು ಪ್ರಚಾರ ಮಾಡದಂತೆ ತಡೆಯಾಜ್ಞೆ ತಂದದ್ದು ಅವುಗಳ ಅಭಿವ್ಯಕ್ತಿ ಸತ್ವವನ್ನು ಕುಗ್ಗಿಸಲು ಅಲ್ಲ. ಅನೇಕ ಸಂಕಷ್ಟಗಳ ನಡುವೆ ಬೆಳೆದ ನಾನು ನನ್ನ ಸ್ವಾಭಿಮಾನ ಮತ್ತು ವ್ಯಕ್ತಿತ್ವದ ಬಗ್ಗೆ ಸದಾ ಎಚ್ಚರದಲ್ಲಿ ಇದ್ದೇನೆ. ಕೆಲವು ಸುಳ್ಳು ಸುದ್ದಿಗಳು ನನ್ನ ಬಗ್ಗೆ ಹರಿದಾಡಿದ ಕಾರಣ ನಾನು ತಡೆಯಾಜ್ಞೆ ತಂದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.



Join Whatsapp